ಈ ಸಿಂಪಲ್ ಜ್ಯೂಸ್ ಕುಡಿದ್ರೆ ಆರೋಗ್ಯವಾಗಿರ್ತೀರಿ: “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ”ಇದು ಹೊಸ ಅಂಕಣ

ಸುಂದರ ಜೀವನಶೈಲಿ, ನೆಮ್ಮದಿ, ಆರೋಗ್ಯ, ಆರೋಗ್ಯಯುತ ತಿಂಡಿ,ಬದುಕು, ಕ್ಷೇಮ ಸಮಾಚಾರ ಇತ್ಯಾದಿಗಳ ಕುರಿತು ಸಿಂಥಿಯಾ ಮೆಲ್ವಿನ್ ಮಸ್ಕರೇನ್ಹಸ್ ಮತ್ತು ಸಿಲ್ವಿಯಾ ಕೊಡ್ದೆರೋ  ಅವರು ಪ್ರತೀ ಬುಧವಾರ “ನಮ್ಮ ಆರೋಗ್ಯ ನಮ್ಮ ಕೈಲಿ”ಎನ್ನುವ ಹೊಸ ಅಂಕಣದಲ್ಲಿ ನಿಮಗೆ ಹೇಳ್ತಾರೆ. ಇದು ಅಕ್ಕ-ತಂಗಿ ಬರೆಯುವ ಅಂಕಣದ ಮೊದಲ ಕಂತು

ಹೂವಿನ ಎಲೆಗಳಿಂದಲೂ ಆರೋಗ್ಯಯುತ ತಿಂಡಿ ತಿನಿಸುಗಳನ್ನು ಮಾಡಬಹುದು. ನಿಮ್ಮ ಮನೆಯಲ್ಲಿಯೇ ನೀವು ದಾಸವಾಳ ಹೂವನ್ನು ನೋಡಿರುತ್ತೀರಿ. ಅದರ ಅಂದ ಚೆಂದ ನೋಡಿ ಖುಷಿಪಟ್ಟಿರುತ್ತೀರಿ. ಅದರ ಎಲೆಯಿಂದ ಒಂದೊಳ್ಳೆ ಆರೋಗ್ಯಯುತ ಜ್ಯೂಸ್ ಮಾಡಬಹುದು ಈ ಜ್ಯೂಸ್ ನಿಂದ ಏನೇನೆಲ್ಲ ಉಪಯೋಗಗಳಿವೆ ಅನ್ನುವುದನ್ನು ಇಂದಿನ ಅಂಕಣದಲ್ಲಿ ನಿಮಗೆ ತಿಳಿಸ್ತೇವೆ.

ದಾಸವಾಳದ ಎಲೆಯ ಜ್ಯೂಸ್

ದಾಸವಾಳದ ಹೂವನ್ನು ಎಲ್ಲರೂ ಉಪಯೋಗಿಸುವುದನ್ನು ನೋಡಿರುತ್ತೇವೆ. ಆದರೆ ಇದರ ಎಲೆಯೂ ಕೂಡ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಅಂತ ನಿಮಗೆ ಗೊತ್ತಾ? ಯಸ್. ದಾಸವಾಳದ ಎಲೆಯ ಜ್ಯೂಸ್ ಅನ್ನು ತಯಾರಿಸಿ ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ. ಇದು ದೇಹವನ್ನು ತುಂಬಾ ತಂಪಾಗಿಡಲು ಸಹಾಯಮಾಡುತ್ತದೆ.

ಯಾವುದೇ ರೀತಿಯ ಉಷ್ಣ ಹುಣ್ಣು ಬಾಯಲ್ಲಿ ಬಿದ್ದಿದ್ದರೆ ಅದನ್ನು ಈ ಜ್ಯೂಸ್ ನಿವಾರಣೆ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು.

ಹೀಗೆ ಮಾಡಿ:

ದಾಸವಾಳದ ಎಲೆಯ ಜ್ಯೂಸ್ ಅನ್ನು ತಯಾರಿಸಲು ಹೆಚ್ಚಿನ ಸಮಯ ಬೇಕಾಗಿಲ್ಲ.ಕಡಿಮೆ ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ಜ್ಯೂಸ್ ಅನ್ನು ತಯಾರಿಸಬಹುದು. ದಾಸವಾಳದ ಸ್ವಲ್ಪ ಎಲೆಯನ್ನು ತೆಗೆದು ಚೆನ್ನಾಗಿ ತೊಳೆದು ಕೈಯಲ್ಲಿ ಕಿವುಚಿ ಅಥವಾ ಮಿಕ್ಸಿ-ಜಾರ್ ನಲ್ಲಿ ರುಬ್ಬಿ ನಂತರ ಅದನ್ನು ಸೋಸಿ ಅದಕ್ಕೆ ಸ್ವಲ್ಪ ಕಾಳುಮೆಣಸಿನ ಹುಡಿ ಹಾಗೂ ಉಪ್ಪು ಅಥವಾ ಬೆಲ್ಲವನ್ನು ಸೇರಿಸಿ ಬರೀ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿಯಾಗಿದೆ.ನೋಡಿ ಇದೀಗ ಬೇಸಿಗೆಯ ಹೊತ್ತು, ಈ ಜ್ಯೂಸ್ ಅನ್ನು ಒಮ್ಮೆ ಮನೆಯಲ್ಲಿ ಮಾಡಿ ಕುಡೀರಿ.ನಿಮ್ಮ ಆರೋಗ್ಯ ಹಿತವಾಗಿರುದರಲ್ಲಿ ಸಂದೇಹವೇ ಬೇಡ.

ಸಿಂಥಿಯಾ ಮೆಲ್ವಿನ್ ಮಸ್ಕರೇನ್ಹಸ್