ಅ.1 ರಿಂದ ಹೊಸ ಬದಲಾವಣೆ ದೇಶದಲ್ಲಾಗಲಿದೆ. ಹೆಚ್ಚಿನ ಬದಲಾವಣೆಗಳಿಂದ ಅಂತಿಮವಾಗಿ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಜನಸಾಮಾನ್ಯ ದೈನಂದಿನ ಸಮಯ ಮಾತ್ರವಲ್ಲ, ಜನಸಾಮಾನ್ಯನ ಜೇಬಿನ ಮೇಲೆಯೂ ನೇರ ಪರಿಣಾಮ ಬೀರುವ ಹೊಸ ಬದಲಾವಣೆಗಳು ಯಾವುದು?ಇಲ್ಲಿದೆ ಮಾಹಿತಿ
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಮತ್ತು ಸಬ್ಸಿಡಿ ಪರಿಷ್ಕರಣೆ
ಪ್ರತಿ ತಿಂಗಳ ಮೊದಲ ದಿನದಂತೆ ಅಕ್ಟೋಬರ್ 1ರಂದು ತೈಲ ಕಂಪನಿಗಳು ವಾಣಿಜ್ಯ ಮತ್ತು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಹೊಸ ದರಗಳನ್ನು ಪ್ರಕಟಿಸಲಿವೆ. ಹೀಗಾಗಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆಯಾಗುವ ಸಾಧ್ಯತೆ ಇದೆ.
ಉಜ್ವಲ ಯೋಜನೆ ಮತ್ತು ಸಾಮಾನ್ಯ ಗ್ಯಾಸ್ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇ-ಕೆವೈಸಿ ಮಾಡಿಸದ ಗ್ರಾಹಕರ ಖಾತೆಗಳಿಗೆ ಅಕ್ಟೋಬರ್ 1ರಿಂದ ಸಬ್ಸಿಡಿ ಜಮಾ ಆಗುವುದಿಲ್ಲ ಎಂದು ತಿಳಿಸಲಾಗಿದೆ.
ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ (FD) ನಿಯಮಗಳು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾರ್ಗಸೂಚಿಗಳ ಅನ್ವಯ ಅಕ್ಟೋಬರ್ 1ರಿಂದ ವಿವಿಧ ಬ್ಯಾಂಕ್‌ಗಳ ಸ್ಥಿರ ಠೇವಣಿ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಪ್ರಮುಖವಾಗಿ ಹಿರಿಯ ನಾಗರಿಕರ ಎಫ್‌ಡಿ ಮೇಲಿನ ವಿಶೇಷ ಬಡ್ಡಿದರಗಳ ಅವಧಿ ಕೊನೆಗೊಳ್ಳುವ ಸಾಧ್ಯತೆ ಇದೆ.
ಅಲ್ಲದೆ, ಎಫ್‌ಡಿಯನ್ನು ಅವಧಿಗೆ ಮುನ್ನವೇ ಹಿಂಪಡೆಯುವ ಸಂದರ್ಭದಲ್ಲಿ ವಿಧಿಸಲಾಗುವ ದಂಡದ ಶುಲ್ಕ ಹಾಗೂ ನಿಯಮಗಳನ್ನು ಬ್ಯಾಂಕ್‌ಗಳು ಹೆಚ್ಚು ಕಠಿಣಗೊಳಿಸುತ್ತಿವೆ. ಹೀಗಾಗಿ ಎಫ್‌ಡಿ ಹೊಂದಿರುವ ಗ್ರಾಹಕರು ತಮ್ಮ ಬ್ಯಾಂಕ್‌ನ ನಿಯಮಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ಜನನ ಪ್ರಮಾಣಪತ್ರ ಇನ್ನು ಪ್ರಮುಖ ದಾಖಲೆ
ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ ಅಕ್ಟೋಬರ್ 1ರಿಂದ ಜನನ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ ಪ್ರಾಥಮಿಕ ದಾಖಲೆಯಾಗಲಿದೆ.
ಶಾಲೆ ಮತ್ತು ಕಾಲೇಜು ಪ್ರವೇಶ, ಆಧಾರ್ ಕಾರ್ಡ್ ನೋಂದಣಿ, ಚಾಲನಾ ಪರವಾನಗಿ ಅರ್ಜಿ, ಮತದಾರರ ಪಟ್ಟಿಗೆ ಸೇರ್ಪಡೆ, ಮದುವೆ ನೋಂದಣಿ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜನನ ಪ್ರಮಾಣಪತ್ರವನ್ನು ಪ್ರಮುಖ ಗುರುತಿನ ಮತ್ತು ವಯಸ್ಸಿನ ಪುರಾವೆಯಾಗಿ ಬಳಸಬಹುದು.
ವಿವಿಧ ಸರ್ಕಾರಿ ಹಾಗೂ ಸಾರ್ವಜನಿಕ ಸೇವೆಗಳಿಗೆ ಹತ್ತಾರು ದಾಖಲೆಗಳನ್ನು ಸಲ್ಲಿಸುವ ಗೊಂದಲವನ್ನು ನಿವಾರಿಸಿ, ಡಿಜಿಟಲ್ ವ್ಯವಸ್ಥೆಯನ್ನು ಸರಳಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
UPI ಪಾವತಿಯಲ್ಲಿ ಬದಲಾವಣೆ
ಯುಪಿಐ ಮೂಲಕ ಅಪರಿಚಿತ ಅಥವಾ ಅನುಮಾನಾಸ್ಪದ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಸಿಸ್ಟಮ್ ಸ್ವಯಂಚಾಲಿತವಾಗಿ ವಂಚನೆಯ ಎಚ್ಚರಿಕೆ ಸಂದೇಶಗಳನ್ನು (Fraud Alerts) ಪರದೆಯ ಮೇಲೆ ತೋರಿಸಲಿದೆ.
ಇದರ ಜತೆಗೆ ಅಕ್ಟೋಬರ್ 15ರಿಂದ ₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ ಮರ್ಚೆಂಟ್ (P2M) ಯುಪಿಐ ವಹಿವಾಟುಗಳಿಗೆ ಶೇ.0.4ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದೆ.
ಈ ಶುಲ್ಕವು ವ್ಯಾಪಾರಿಗಳಿಗೆ ಸಂಬಂಧಿಸಿದ್ದು, ಸಾಮಾನ್ಯ ಗ್ರಾಹಕರಿಗೆ ಯುಪಿಐ ಪಾವತಿ ಎಂದಿನಂತೆ ಉಚಿತವಾಗಿರಲಿದೆ.
ಅಕ್ಟೋಬರ್ 2ರಂದು ‘No UPI Day’
ಯುಪಿಐ ವಹಿವಾಟುಗಳಿಗೆ ಎಂಡಿಆರ್ ಶುಲ್ಕ ವಿಧಿಸುವುದನ್ನು ವಿರೋಧಿಸಿ ಮೊಬೈಲ್ ರಿಟೇಲ್ ವ್ಯಾಪಾರಿಗಳ ಸಂಘಟನೆಗಳು ಅಕ್ಟೋಬರ್ 2ರಂದು ‘No UPI Day’ ಆಚರಿಸಲು ಕರೆ ನೀಡಿವೆ.
‘MDR ಮುಕ್ತ UPI’ಗೆ ಒತ್ತಾಯಿಸಿ ಅಂದು ಪ್ರತಿಭಟನೆ ನಡೆಸಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ವ್ಯಾಪಾರಿಗಳು ಅಂದು ಯುಪಿಐ ಪಾವತಿ ಸ್ವೀಕರಿಸದಿರಲು ನಿರ್ಧರಿಸಿರುವ ಸಾಧ್ಯತೆ ಇದೆ.
ಎಸ್‌ಬಿಐ ಎಟಿಎಂ ನಿಯಮ
ಎಸ್‌ಬಿಐ ಸಂಬಳ ಪ್ಯಾಕೇಜ್ ಖಾತೆದಾರರಿಗೆ ಇತರ ಬ್ಯಾಂಕ್ ಎಟಿಎಂಗಳಲ್ಲಿ ಸಿಗುತ್ತಿದ್ದ ಉಚಿತ ಮಾಸಿಕ ವಹಿವಾಟುಗಳ ಸಂಖ್ಯೆಯನ್ನು 10ರಿಂದ 5ಕ್ಕೆ ಇಳಿಸಲಾಗಿದೆ.
ಅಕ್ಟೋಬರ್ 1ರಿಂದ ಈ ಬದಲಾವಣೆ ಜಾರಿಗೆ ಬರಲಿದ್ದು, ಉಚಿತ ಮಿತಿಯನ್ನು ಮೀರಿದ ವಹಿವಾಟುಗಳಿಗೆ ಅನ್ವಯಿಸುವ ಶುಲ್ಕವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.
ಟಿಡಿಎಸ್ ನಿಯಮದಲ್ಲೂ ಬದಲಾವಣೆ
ಅನಿವಾಸಿ ಭಾರತೀಯರಿಂದ ಆಸ್ತಿ ಖರೀದಿಸುವ ನಿವಾಸಿ ವ್ಯಕ್ತಿಗಳು ಅಥವಾ ಎಚ್‌ಯುಎಫ್‌ಗಳು ಟಿಡಿಎಸ್ ವರದಿ ಮಾಡುವ ಸಂದರ್ಭದಲ್ಲಿ ಹೊಸ ವೇಳಾಪಟ್ಟಿ ಇ (Schedule E) ಅನ್ನು ಭರ್ತಿ ಮಾಡುವುದು ಕಡ್ಡಾಯವಾಗಲಿದೆ.
ಈ ಬದಲಾವಣೆಯಿಂದ ಎನ್‌ಆರ್‌ಐಗಳಿಂದ ಆಸ್ತಿ ಖರೀದಿಸುವ ಸಂದರ್ಭದಲ್ಲಿ ಟಿಡಿಎಸ್ ಸಂಬಂಧಿತ ಪ್ರಕ್ರಿಯೆಯಲ್ಲಿ ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ.















