ಕುಂದಾಪುರ: ಹೆಮ್ಮಾಡಿ ಪೇಟೆಯಿಂದ ಜಾಲಾಡಿ ತನಕ ಸರ್ವೀಸ್ ರಸ್ತೆ ನಿರ್ಮಾಣ ಹಾಗೂ ಯೂಟರ್ನ್ ಬೇಡಿಕೆಯ ಈಡೇರಿಕೆಗಾಗಿ ದಾರಿಗಾಗಿ ಧ್ವನಿ ಹೋರಾಟ ಸಮಿತಿ ರಚನೆಗೊಂಡಿದ್ದು, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಭಾನುವಾರ ಇಲ್ಲಿನ ಸಂತೋಷನಗರ ಬಸ್ ನಿಲ್ದಾಣ ಬಳಿಯ ಬಿಲ್ಲವ ಸಮಾಜ ಮಂದಿರ ವಠಾರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಸಂಪೂರ್ಣ ಅವೈಜ್ಙಾನಿಕವಾಗಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡದೆ ತಮಗಿಷ್ಟ ಬಂದಂತೆ ಗುತ್ತಿಗೆ ಕಂಪೆನಿಗಳು ಕಾಮಗಾರಿ ನಿರ್ವಹಿಸುತ್ತಿರುವುದು ದುರದೃಷ್ಟಕರ. ಮನಬಂದಂತೆ ಕಾಮಗಾರಿ ನಡೆಸುತ್ತಿರುವುದರಿಂದ ಹಲವು ಅಪಘಾತಗಳು ನಡೆದಿವೆ. ಜಾಲಾಡಿ ಹೆಮ್ಮಾಡಿ ಮಧ್ಯದಲ್ಲಿ ಯೂಟರ್ನ್ ಕೊಡಲೇಬೇಕು. ಇಲ್ಲವಾದರೆ ಹೆಮ್ಮಾಡಿಯಿಂದ ಜಾಲಾಡಿಗೆ, ಸಂತೋಷನಗರಕ್ಕೆ ಹೋಗುವವರು ತಲ್ಲೂರಿನಿಂದ ಯೂಟರ್ನ್ ತೆಗೆದುಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಪಂಚಾಯತ್ ಸರ್ವೀಸ್ ರಸ್ತೆಗಾಗಿ ಸಾಕಷ್ಟು ಬಾರಿ ಮನವಿ ನೀಡಿದೆ. ಆದರೆ ಅವ್ಯಾವುದಕ್ಕೂ ಬೆಲೆ ಇಲ್ಲದಂತಾಗಿದೆ. ಈ ಎಲ್ಲಾ ಅವ್ಯವಸ್ಥೆಯ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸಲು ತುರ್ತು ಹೋರಾಟದ ಅವಶ್ಯವಿದೆ. ಎಲ್ಲರೂ ಪಕ್ಷಭೇದ ಮರೆತು ಹೋರಾಟ ಸಮಿತಿಯೊಂದಿಗೆ ಕೈಜೋಡಿಸಬೇಕು ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮಾತನಾಡಿ, ಹೆದ್ದಾರಿ ಗುತ್ತಿಗೆ ವಹಿಸಿಕೊಂಡ ಕಂಪೆನಿ ಮಾಲಕರು ಬೇರೆ ಊರಿನವರಾಗಿರಬಹುದು, ಆದರೆ ಈ ಊರು ನಮ್ಮದು. ಯಾವ ಕಡೆಗಳಲ್ಲಿ ಏನೇನು ಯೋಜನೆಗಳಿವೆ ಎಂದು ಹೆದ್ದಾರಿ ಇಲಾಖೆ ಕನಿಷ್ಟಪಕ್ಷ ಸ್ಥಳೀಯ ಪಂಚಾಯತ್‌ಗಳಿಗೆ ತಿಳಿಸುತ್ತಿಲ್ಲ. ಎಲ್ಲಿ ಅಂಡರ್‌ಪಾಸ್, ಸರ್ವೀಸ್‌ರಸ್ತೆ, ಯೂಟರ್ನ್ ಕೊಡುತ್ತೇವೆ ಎಂಬುವುದನ್ನು ಕೊನೆಕ್ಷಣದವರೆಗೂ ಸಾರ್ವಜನಿಕರ ಗಮನಕ್ಕೆ ತರುತ್ತಿಲ್ಲ. ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ತಿರುಗಾಡುತ್ತದೆ ಎಂದು ನಾವು ನಮ್ಮ ಓಡಾಡುವ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿ ಕಿ.ಮೀಗಟ್ಟಲೆ ಸುತ್ತುವರಿದು ಬರುದು ಅರ್ಥಹೀನ. ಹೆಮ್ಮಾಡಿಯಲ್ಲಿ ದೊಡ್ಡ ಯುವಪಡೆ ಇದೆ. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆಲ್ಲಾ ಒಂದಾಗಿ ಒಗ್ಗಟ್ಟು ಪ್ರದರ್ಶಿಸುವ ಯುವಕರು ಈ ಹೋರಾಟದಲ್ಲೂ ಮುಂಚೂಣಿಯಲ್ಲಿರಬೇಕು. ಹೀಗಾದರೆ ಮಾತ್ರ ನಮ್ಮ ಹೋರಾಟ ಯಶಸ್ವಿಯಾಗುತ್ತದೆ ಎಂದ ಅವರು, ಯೂಟರ್ನ್ ಹಾಗೂ ಕ್ರಾಸಿಂಗ್‌ಗಾಗಿ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಇದುವರೆಗೂ ಹೆಮ್ಮಾಡಿ ಜನರ ಸಮಸ್ಯೆಗಳಿಗೆ ಯಾವ ರಾಜಕೀಯ ಪಕ್ಷಗಳು ಕಿವಿಯಾಗಿಲ್ಲ ಎಂದು ಶಶಿಧರ ಹೆಮ್ಮಾಡಿ ಆರೋಪಿಸಿದರು.
ಪಂಚಾಯಿತಿ ಸದಸ್ಯ ಸಯ್ಯದ್ ಯಾಸೀನ್ ಮಾತನಾಡಿ, ಯೂಟರ್ನ್ ಹಾಗೂ ಸರ್ವೀಸ್ ರಸ್ತೆಗಾಗಿ ಈ ಹಿಂದೆ ಸಾಕಷ್ಟು ಮನವಿ ನೀಡಿದ್ದೇವೆ. ಹಿಂದಿನ ಉಸ್ತುವಾರಿ ಸಚಿವೆ ಜಯಮಾಲಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಜಿಲ್ಲಾಧೀಕಾರಿಗಳಿಗೆ ಸೂಚನೆ ನೀಡಿದ್ದರು. ಎರಡೆರಡು ಬಾರಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ ಬಿಟ್ಟರೆ ಏಣು ಬದಲಾವಣೆಗಳಾಗಿಲ್ಲ. ಪ್ರಾಜೆಕ್ಟ್ ಡೈರೆಕ್ಟರ್ ಅವರನ್ನು ಣೇರ ಭೇಟಿಯಾಗಿ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಅಂತೋನಿ ಲೂವಿಸ್, ಸದಸ್ಯರಾದ ರಾಘವೇಂದ್ರ ಪೂಜಾರಿ, ಆಶಾ ಆನಂದ ಪೂಜಾರಿ, ಸ್ಥಳೀಯ ಮುಖಂಡರಾದ ರಾಜು ಪೂಜಾರಿ ಕಾಳೂರಮನೆ, ಯು, ಸತ್ಯನಾರಾಯಣ ರಾವ್, ಜನಾರ್ದನ್ ಪೂಜಾರಿ, ಜಲಜ ಬುಗ್ರಿಕಡು, ಕರೀಮ್ ಸಾಹೇಬ್, ಬಾಬು ಅಜ್ಜಿಮನೆ, ಹಸನ್ ಸಾಹೇಬ್, ಗೋಪಾಲ ಬುಗ್ರಿಕಡು, ಹರೀಶ್ ಹೊಸ್ಕಳಿ ಮೊದಲಾದವರು ಇದ್ದರು. ರಾಘವೇಂದ್ರ ಕುಲಾಲ್ ಪ್ರಸ್ತಾಪಿಸಿ ಸ್ವಾಗತಿಸಿದರು.
ಹೆಮ್ಮಾಡಿ ಪಂಚಾಯಿತಿಗೆ ಮುತ್ತಿಗೆ
ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಙಾನಿಕ ಕಾಮಗಾರಿ ವಿರುದ್ದ ಯೂಟರ್ನ್ ಹಾಗೂ ಸರ್ವೀಸ್ ರಸ್ತೆಗೆ ಆಗ್ರಹಿಸಿ ದಾರಿಗಾಗಿ ಧ್ವನಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು(ಸೋಮವಾರ) ಬೆಳಿಗ್ಗೆ ೧೦.೩೦ಕ್ಕೆ ಜಾಲಾಡಿ, ಹೆಮ್ಮಾಡಿ, ಸಂತೋಷನಗರ, ಬುಗ್ರಿಕಡು ನಿವಾಸಿಗಳು ಹೆಮ್ಮಾಡಿ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.