ಕುಂದಾಪುರ: ೧೯೭೩ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇದೀಗ ಸುವರ್ಣಮಹೋತ್ಸವದ ಸಮೀಪದಲ್ಲಿದೆ. ಕಳೆದ ಹತ್ತು ವರ್ಷಗಳಿಂದ ಸ್ವಲ್ಪಮಟ್ಟಿನ ಲಾಭ ಪಡೆದುಕೊಂಡು ಪ್ರಸ್ತುತ ೮೬ಲಕ್ಷ ಲಾಭವನ್ನು ಗಳಿಸಿದೆ. ಸಂಸ್ಥೆಯ ಈ ಸಾಧನೆಗೆ ಗ್ರಾಮೀಣಭಾಗದ ರೈತರು ಕೊಡುಗೆ ಅಪಾರವಾದುದು ಎಂದು ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ದೇವಾಡಿಗ ಹೇಳಿದರು.
ಅವರು ಬುಧವಾರ ಹೆಮ್ಮಾಡಿಯಲ್ಲಿರುವ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಸರಿಯಾಗಿ ಕೆಲಸವನ್ನು ಮಾಡಿದರೆ ಆ ಸಂಸ್ಥೆ ಅಭಿವೃದ್ದಿ ಹೊಂದುತ್ತದೆ. ನಮ್ಮ ಸಂಸ್ಥೆಯ ಸಾಧನೆಯೂ ಕೂಡ ಸಾಧಾರಣ ಮಾತಲ್ಲ. ನಷ್ಟದಲ್ಲಿದ್ದ ಸಂಸ್ಥೆ ಇದೀಗ ಅತೀ ಹೆಚ್ಚು ಲಾಭವನ್ನು ಗಳಿಸಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಅವಿರತವಾದ ಶ್ರಮವೇ ಇದಕ್ಕೆಲ್ಲಾ ಕಾರಣ. ಈ ಹಿಂದೆ ಹತ್ತು ಲಕ್ಷದವರೆಗೆ ಸಾಲಾವನ್ನು ಕೊಡುತ್ತಿದ್ದು, ಇನ್ನುಮುಂದೆ ಇಪ್ಪತ್ತೈದು ಲಕ್ಷದವರೆಗೂ ಸಾಲಾ ನೀಡಲು ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿದ್ದು, ಶೇರುದಾರರಿಗೆ ಶೇಕಡಾ ೧೫ ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಿದ್ದೇವೆ ಎಂದರು.
ಇದೇ ವೇಳೆಯಲ್ಲಿ ಕಳೆದ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಒಟ್ಟು ಒಂಭತ್ತು ಮಂದಿ ವಿದ್ಯಾರ್ಥಿಗಳಿಗೆ ನಗದು ನೀಡಿ ಸನ್ಮಾನಿಸಲಾಯಿತು.
ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಅಂತೋನಿ ಲೂವಿಸ್, ನಿರ್ದೇಶಕರುಗಳಾದ ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ, ಆನಂಧ ಪಿಎಚ್, ಚಂದ್ರ ನಾಯ್ಕ್, ಸಂತೋಷ್ ಕುಮಾರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಚಂದ್ರಶೇಖರ ಪೂಜಾರಿ, ಸಾಧು ಎಸ್ ಬಿಲ್ಲವ, ಚಂದ್ರಮತಿ ಶೆಡ್ತಿ, ವಲಯ ಮೇಲ್ವಿಚಾರಕರಾದ ಶಿವರಾಮ್ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಎ ಪೂಜಾರಿ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಭಾಸ್ಕರ ಪೂಜಾರಿ ಸ್ವಾಗತಿಸಿದರು, ಶಂಕರ್ ಪಿ.ಎಚ್ ಧನ್ಯವಾದವಿತ್ತರು.












