ಎನ್‌ಟಿಎಸ್ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ: ಸಿಪಿಐ ಮಂಜಪ್ಪ ಡಿ.ಆರ್

ಕುಂದಾಪುರ: ಹೆಮ್ಮಾಡಿ ಜಂಕ್ಷನ್‌ನಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಬಗ್ವಾಡಿಯ ಎನ್‌ಟಿಎಸ್ ಕನ್ವೆನ್ಶನ್ ಹಾಲ್ ವತಿಯಿಂದ ಕುಂದಾಪುರ ಪೊಲೀಸ್ ಇಲಾಖೆಗೆ ಬ್ಯಾರಿಕೇಡ್ ಹಸ್ತಾಂತರಿಸಲಾಯಿತು.

ಬ್ಯಾರಿಕೇಡ್ ಸ್ವೀಕರಿಸಿ ಮಾತನಾಡಿದ ಕುಂದಾಪುರ ಪೊಲೀಸ್ ವೃತ್ತನಿರೀಕ್ಷಕ ಮಂಜಪ್ಪ ಡಿ.ಆರ್, ಕೊಲ್ಲೂರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿರುವ ಹೆಮ್ಮಾಡಿಯಲ್ಲಿ ಈ ಹಿಂದೆ ಸಾಕಷ್ಟು ಅಪಘಾತಗಳು ನಡೆದಿತ್ತು. ಅಪಘಾತ ತಡೆಗೆ ಬ್ಯಾರಿಕೇಡ್ ಅಳವಡಿಸಲು ಕೇಳಿಕೊಂಡಾಗ ಎನ್‌ಟಿಎಸ್ ಕನ್ವೆನ್ಶನ್ ಹಾಲ್ ಮಾಲಕರಾದ ತಿಮ್ಮ ಪೂಜಾರಿಯವರು ಹೆಮ್ಮಾಡಿ ಜಂಕ್ಷನ್‌ಗೆ ಆರು ಬ್ಯಾರಿಕೇಡ್‌ಗಳನ್ನು ಉಚಿತವಾಗಿ ನೀಡಿದ್ದಾರೆ. ಸಾರ್ವಜನಿಕರ ಜೀವ ರಕ್ಷಣೆಗಾಗಿ ಬ್ಯಾರಿಕೇಡ್ ನೀಡಿದ ಎನ್‌ಟಿಎಸ್ ಸಂಸ್ಥೆಯ ಈ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.

ಅತೀವೇಗ ಮತ್ತು ಅಜಾಗರುಕತೆ ಚಾಲನೆಯಿಂದಾಗಿಯೇ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಪ್ಸ್ ಹಾಕಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲಾ ಕಡೆಗಳಲ್ಲಿಯೂ ದಾನಿಗಳ ಸಹಕಾರದಿಂದ ವೇಗ ತಡೆಗಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸುತ್ತಿದ್ದೇವೆ ಎಂದರು.

ಬ್ಯಾರಿಕೇಡ್ ನೀಡಿರುವ ಬಗ್ವಾಡಿಯ ಎನ್‌ಟಿಎಸ್ ಕನ್ವೆನ್ಶನ್ ಹಾಲ್‌ನ ಮಾಲಕ ತಿಮ್ಮ ಪೂಜಾರಿಯವರ ಪರವಾಗಿ ರಾಜು ಪೂಜಾರಿಯವರಿಗೆ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್ ಹಾಗೂ ಹೆಮ್ಮಾಡಿ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ ಹೂಗುಚ್ಛ ನೀಡಿ ಅಭಿನಂದಿಸಿದರು.

ಈ ವೇಳೆಯಲ್ಲಿ ಕುಂದಾಪುರ ಸಂಚಾರ ಠಾಣೆಯ ಪಿಎಸ್‌ಐ ಸುದರ್ಶನ್, ಗ್ರಾ.ಪಂ ಸದಸ್ಯರಾದ ಆನಂದ ಪಿಎಚ್, ರಾಘವೇಂದ್ರ ಪೂಜಾರಿ ಹೆದ್ದಾರಿಮನೆ, ಸಯ್ಯದ್ ಯಾಸೀನ್, ಪಿಡಿಓ ಮಂಜು ಬಿಲ್ಲವ, ಹೆಮ್ಮಾಡಿ ರಿಕ್ಷಾ ನಿಲ್ದಾಣದ ಅಧ್ಯಕ್ಷ ಮಂಜುನಾಥ್ ಮೊಗವೀರ, ಸ್ಥಳೀಯರಾದ ರವಿ.ಕೆ ಹೆಮ್ಮಾಡಿ, ಪ್ರವೀಣ್ ದೇವಾಡಿಗ, ದಿವಾಕರ ಕೋಟ್ಯಾನ್, ಸುರೇಶ್ ಪೂಜಾರಿ ಅರೆಕಲ್ಲುಮನೆ ಮೊದಲಾದವರು ಉಪಸ್ಥಿತರಿದ್ದರು.