ಕುಂದಾಪುರ: ಹೆಮ್ಮಾಡಿ ಹೇಮಾಪುರ ಉಡುಪರ ಮನೆ ರಸ್ತೆ ಸಮೀಪ ಇರುವ ಹುಂಚನಕೇರಿಯ ಮನೆಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದಿದೆ. ಹಿಂದೆ ಹೀಗಿರಲಿಲ್ಲ. ಯಾವತ್ತು ಸಿಗಡಿ ಕೆರೆ ಆರಂಭವಾಯಿತೋ ಅಂದಿನಿಂದ ನಮ್ಮ ಬಾವಿ ನೀರು ಉಪ್ಪಾಗುತ್ತಿದೆ. ಅದಕ್ಕೆ ಸಿಗಡಿ ಕೆರೆಯಲ್ಲಿ ನಿಲ್ಲಿಸುವ ಉಪ್ಪು ನೀರು ಕಾರಣ. ಸಿಗಡಿ ಕೆರೆ ಬಂದ್ ಮಾಡಿ ನಮ್ಮ ಕುಡಿಯುವ ನೀರಿನ ಹಕ್ಕು ನಮಗೆ ಕೊಡಿ ಎಂದು ಕೇಳಿಕೊಂಡರೂ ಗ್ರಾಪಂಗೆ ಕುಡಿಯುವ ನೀರಿಗಿಂತಲೂ ಸಿಗಡಿ ಕೃಷಿಯೇ ಹೆಚ್ಚಾಯಿತು. ಸಿಗಡಿ ಕೆರೆ ಬಂದ್ ಮಾಡಿ ಇಲ್ಲಾ ನಮಗೆ ಗ್ರಾಪಂ ಕುಡಿಯುವ ನೀರು ವ್ಯವಸ್ಥೆ ಮಾಡಲಿ ಎಂದು ಪರಿಸರ ನಿವಾಸಿಗಳು ಹೆಮ್ಮಾಡಿ ಆದರ್ಶ ಯುವಕ ಮಂಡಲ ಸಭಾಂಗಣದಲ್ಲಿ ಮಂಗಳವಾರ ನಡೆದ ಹೆಮ್ಮಾಡಿ ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆ ವಿಶೇಷ ಗ್ರಾಮ ಸಭೆಯಲ್ಲಿ ಅಳಲು ತೋಡಿಕೊಂಡರು.
ಬಾವಿ ನೀರು ಉಪ್ಪು:
ಹೆದ್ದಾರಿ ಸೇತುವೆ ನಿರ್ಮಾಣದ ಹಿನ್ನೆಲೆಯಲ್ಲಿ ಕಲ್ಲುಮಣ್ಣು ರಾಶಿ ಹಾಕಿದ್ದು, ತೆರವು ಮಾಡದ ಕಾರಣ ಕೃಷಿಗೆ ಉಪ್ಪುನೀರು ನುಗ್ಗಿ ಕೃಷಿ ಮಾಡದಂತಾ ವಾತಾವರಣ ಸೃಷ್ಟಿಸಿದೆ. ಗುತ್ತಿಗೆ ಪಡೆದವರಿಗೆ ಸಂಗ್ರವಾದ ಕಲ್ಲುಮಣ್ಣು ತೆರವು ಮಾಡಲು ಸೂಚಿಸಬೇಕು ಎಂದು ಗ್ರಾಮಸ್ಥರು ಸೂಚಿಸಿದರು. ಕಿಂಡಿ ಅಣೆಕಟ್ಟು ಹಲಗೆ ಸಮಸ್ಯೆಯಿಂದ ಪರಿಸದ ಬಾವಿಗಳು ನೀರು ಉಪ್ಪಾಗುತ್ತಿದೆ ಎಂದು ಜನ ದೂರಿದರೆ, ಸಣ್ಣ ನೀರಾವರಿ ಇಲಾಖೆ ಹಾಗೂ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದವರಿಗೆ ಗ್ರಾಪಂ ಮೂಲಕ ಸಮಸ್ಯೆ ಪರಿಹರಿಸುವಂತೆ ಎಚ್ಚರಿಸಲಾಗುತ್ತದೆ ಎಂದು ಪಿಡಿಒ ಹೇಳಿದರು.
ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ:
ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕುರಿತು ಸಂಬಂಧಪಟ್ಟವರಲ್ಲಿ ಸಮಸ್ಯೆ ಹೇಳಿಕೊಂಡರೆ ಕಿವಿಗೆ ಹಾಕಿಕೊಳ್ಳುವುದಿಲ್ಲ. ಸಂತೋಷನಗರಕ್ಕೆ ಬಂದು ಹೋಗಬೇಕಿದ್ದರೆ ಹೆಮ್ಮಾಡಿ ಸರ್ಕಲ್ಗೆ ಹೋಗಿ ಅಲ್ಲಿಂದ ತಲ್ಲೂರು ವೃತ್ತದಲ್ಲಿ ತಿರುವು ಪಡೆದು ಸೇರಬೇಕಾಗುತ್ತದೆ. ಸರ್ಕಲ್, ಡೈವರ್ಶನ್, ಕೂಡು ರಸ್ತೆಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಅಸಮಧಾನ ಹೊರಹಾಕಿದರು.