ಕುಂದಾಪುರ: ಹೆಮ್ಮಾಡಿಯ ಮೂವತ್ತುಮುಡಿಯಿಂದ ಜಾಲಾಡಿವರೆಗೆ ಸರ್ವೀಸ್ ರಸ್ತೆ ನಿರ್ಮಿಸಬೇಕು, ಸಂತೋಷನಗರ-ಜಾಲಾಡಿ ಮಧ್ಯದಲ್ಲಿ ಕೂಡಲೇ ಯೂಟರ್ನ್ ನೀಡಬೇಕೆಂದು ಆಗ್ರಹಿಸಿ ಸೋಮವಾರ ಹೆಮ್ಮಾಡಿ ಗ್ರಾಮಸ್ಥರು ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ದಾರಿಗಾಗಿ ಧ್ವನಿ ಹೋರಾಟ ಸಮಿತಿಯ ಪ್ರಮುಖ ಶಶಿಧರ ಹೆಮ್ಮಾಡಿ ಮಾತನಾಡಿ, ಗ್ರಾಮಪಂಚಾಯಿತಿ ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್ಬಿ ಕಂಪೆನಿಯ ಅಧಿಕಾರಿಗಳನ್ನು ಕರೆಸಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಚರ್ಚೆ ನಡೆಸಲಿ. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವ ಶಕ್ತಿ ನಮಗಿಲ್ಲ. ಇದು ಪಂಚಾಯತ್ನಿಂದ ಮಾತ್ರ ಸಾಧ್ಯ. ಸ್ಥಳೀಯರ ಬೇಡಿಕೆಯಂತೆ ಮೂವತ್ತುಮುಡಿಯಿಂದ ಜಾಲಾಡಿ ತನಕ ಸರ್ವೀಸ್ರಸ್ತೆ ನಿರ್ಮಿಸಬೇಕು.
ಸಂತೋಷನಗರ, ಬುಗ್ರಿಕಡು ಹಾಗೂ ಜಾಲಾಡಿ ನಿವಾಸಿಗಳು ಹೆಮ್ಮಾಡಿಯಿಂದ ಮರಳಿ ಮನೆಗೆ ಹೋಗಬೇಕಾದರೆ ತಲ್ಲೂರು ಸುತ್ತುವರಿದು ಬರಬೇಕಾದ ಅವೈಜ್ಙಾನಿಕ ಕಾಮಗಾರಿಯನ್ನು ಗುತ್ತಿಗೆ ಕಂಪೆನಿ ನಿರ್ವಹಿಸಿದೆ. ಕೂಡಲೇ ಜಾಲಾಡಿ- ಸಂತೋಷನಗರದ ಮಧ್ಯಭಾಗದಲ್ಲಿ ಡಿವೈಡರ್ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ನಮಗೆ ನೇರವಾಗಿ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ. ನಮ್ಮ ಬೇಡಿಕೆಗಳನ್ನು ಪೂರೈಸುವ ಜವಾಬ್ದಾರಿ ಸ್ಥಳೀಯಾಡಳಿತಕ್ಕಿದೆ. ಮೂರು ದಿನಗಳೊಳಗೆ ಡಿವೈಡರ್ ತೆರವುಗೊಳಿಸದಿದ್ದಲ್ಲಿ ದಾರಿಗಾಗಿ ಧ್ವನಿ ಹೋರಾಟ ಸಮಿತಿಯಿಂದ ಸಮಾಲೋಚನಾ ಸಭೆ ನಡೆಸಿ ಮುಂದೆ ತೀವ್ರಸ್ವರೂಪದ ಹೋರಾಟಗಳನ್ನು ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಮಾತನಾಡಿ, ಸಂತೋಷ್ನಗರ, ಜಾಲಾಡಿ, ಹೊಸ್ಕಳಿ, ಬುಗ್ರಿಕಡು ನಿವಾಸಿಗಳು ಹೆಮ್ಮಾಡಿಗೆ ಹೋಗಿ ವಾಪಾಸು ಬರಬೇಕಾದರೂ ವಿರುದ್ಧ ದಿಕ್ಕಿನಲ್ಲಿ ಬರಬೇಕು. ಇಲ್ಲದಿದ್ದರೆ ತಲ್ಲೂರಿಗೆ ಹೋಗಿ ಬರಬೇಕು. ಇದರಿಂದ ಈ ಪರಿಸರದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಜಾಲಾಡಿಯಿಂದ ಮೂವತ್ತುಮುಡಿಯ ತನಕವೂ ಎರಡೂ ಕಡೆಗಳಲ್ಲಿ ಸರ್ವೀಸ್ ರಸ್ತೆಯ ಅಗತ್ಯವಿದೆ. ಸಂಬಂಧಪಟ್ಟವರ ಬಳಿ ಈ ಬಗ್ಗೆ ಮಾತನಾಡಿದರೆ ಹೆಮ್ಮಾಡಿ ಭಾಗದಲ್ಲಿ ಭೂಸ್ವಾದೀನ ಪ್ರಕ್ರಿಯೆ ನಡೆದಿಲ್ಲ ಎಂದು ಸಬೂಬು ನೀಡುತ್ತಾರೆ. ಆದರೆ ಯಾವ ಭಾಗಗಳಲ್ಲಿ, ಯಾವ ಸರ್ವೇ ನಂಬರ್ನಲ್ಲಿ ಮತ್ತು ಯಾವ ಕಾರಣಕ್ಕೆ ಭೂಸ್ವಾದೀನ ಪ್ರಕ್ರಿಯೆ ನಡೆದಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದರು.
ಪ್ರತಿಭನಾಕಾರರ ಎದುರಲ್ಲೇ ಐಆರ್ಬಿ ಪ್ರಾಜೆಕ್ಟ್ ಇಂಜಿನಿಯರ್ ಯೋಗೇಂದ್ರಪ್ಪನವರಿಗೆ ಕರೆ ಮಾಡಿ ಮಾತನಾಡಿದ ಪಂಚಾಯತ್ ಸದಸ್ಯ ಸಯ್ಯದ್ ಯಾಸೀನ್, ಹೆಮ್ಮಾಡಿಯಲ್ಲಿ ಸರ್ವೀಸ್ ರಸ್ತೆಗಾಗಿ ೨೫ಕ್ಕೂ ಅಧಿಕ ಮನವಿ ಪತ್ರಗಳನ್ನು ಪಂಚಾಯತ್ ಮೂಲಕ ಕೊಟ್ಟಿದ್ದೇವೆ. ನಮ್ಮ ಒಂದೇ ಒಂದು ಮನವಿ ಪತ್ರಗಳಿಗೆ ಉತ್ತರ ಬಂದಿಲ್ಲ. ಇಷ್ಟು ದಿನಗಳ ಕಾಲ ನಾವೆಲ್ಲರೂ ತಾಳ್ಮೆಯಿಂದ ಇದ್ದೆವು. ಆದರೆ ನಮ್ಮ ಒಳ್ಳೆತನದ ಲಾಭವನ್ನು ಪಡೆದು ಅವೈಜ್ಙಾನಿಕ ರಸ್ತೆ ಕಾಮಗಾರಿ ನಿರ್ವಹಿಸಿ ಊರಿನ ಸೌಂದರ್ಯವನ್ನೇ ಸರ್ವನಾಶ ಮಾಡಿದ್ದೀರಿ. ನಾನು ಹಲವು ಭಾರಿ ನಿಮ್ಮ ಬಳಿ ಬಂದು ಸಮಸ್ಯೆಗಳನ್ನು ವಿವಿರಿದ್ದೇನೆ. ನಿಮ್ಮಿಂದ ಸಮಸ್ಯೆ ಪರಿಹಾರ ಆಗುತ್ತದೆ ಎಂಬ ವಿಶ್ವಾಸವಿತ್ತು. ಗ್ರಾಮಸ್ಥರಿಗೆ ಚುನಾಯಿತ ಪ್ರತಿನಿಧಿಗಳಾದ ನಾವು ಹೇಗೆ ಮುಖ ತೋರಿಸುವುದು ಎಂದು ಆಕ್ರೋಶಿತರಾದರು.
ಎಡಿಸಿ ಹಾಗೂ ಇಒ ಗೆ ಕರೆ:
ಪಂಚಾಯತ್ಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಐಆರ್ಬಿ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭ ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ ಹಾಗೂ ಪಿಡಿಓ ಚಂದ್ರ ಬಿಲ್ಲವ ಅವರು ಮೊದಲಿಗೆ ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ| ನಾಗಭೂಷಣ ಉಡುಪ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಆ ಬಳಿಕ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೂ ಕರೆ ಮಾಡಿ ಸಮಸ್ಯೆ ಕುರಿತು ಮನವರಿಕೆ ಮಾಡಿದರು.
ಈ ವೇಳೆಯಲ್ಲಿ ಪಂಚಾಯತ್ ಸದಸ್ಯರಾದ ಸಯ್ಯದ್ ಯಾಸೀನ್, ರಾಘವೇಂದ್ರ ಪೂಜಾರಿ, ಸುಧಾಕರ ದೇವಾಡಿಗ, ಆಶಾ ಆನಂದ್, ಪಿಡಿಓ ಮಂಜು ಬಿಲ್ಲವ ಇದ್ದರು.
ದಾರಿಗಾಗಿ ಧ್ವನಿ ಹೋರಾಟ ಸಮಿತಿಯ ಅಧ್ಯಕ್ಷ ರಾಜು ಪೂಜಾರಿ ಕಾಳೂರುಮನೆ, ಕಾರ್ಯದರ್ಶಿ ಜನಾರ್ದನ್ ಪೂಜಾರಿ, ರಾಘವೇಂದ್ರ ಕುಲಾಲ್, ಸತ್ಯನಾರಾಯಣ ರಾವ್, ಕೃಷ್ಣ ಕುಲಾಲ್, ಜಲಜ ಮೊಗವೀರ, ಕನಕ ಬುಗ್ರಿಕಡು, ಇಮ್ತಿಯಾಝ್, ರತ್ನಾಕರ ಭಂಡಾರಿ, ಕೃಷ್ಣ ಕೋಟ್ಯಾನ್, ಬಾಬು ಅಜ್ಜಿಮನೆ, ರವಿ ಬುಗ್ರಿಕಡು, ರಿಕ್ಷಾ ಚಾಲಕರಾದ ಪ್ರವೀಣ್ ದೇವಾಡಿಗ, ಶಾಹಿನ್, ಪ್ರಶಾಂತ ಪಡುಮನೆ ಮೊದಲಾದವರು ಇದ್ದರು.
ಪಂಚಾಯತ್ಗೆ ಮನವಿ ಸಲ್ಲಿಸಿದ ಬಳಿಕ ಹೆಮ್ಮಾಡಿ ಪಂಚಾಯತ್ ಹಾಗೂ ದಾರಿಗಾಗಿ ಧ್ವನಿ ಹೋರಾಟ ಸಮಿತಿ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಎಸಿ, ಈ ಬಗ್ಗೆ ಕೂಡಲೇ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗುವುದು. ಡಿಸಿಯವರ ಗಮನಕ್ಕೂ ತರಲಾಗುವುದು ಎಂದು ಭರವಸೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ಪಿಡಿಒ ಮಂಜು ಬಿಲ್ಲವ, ಸಮಿತಿಯ ಅಧ್ಯಕ್ಷ ರಾಜು ಪೂಜಾರಿ ಕಾಳೂರಮನೆ, ಪ್ರಮುಖರಾದ ಕೆಂಚನೂರು ಸೋಮಶೇಖರ ಶೆಟ್ಟಿ, ಶಶಿಧರ ಹೆಮ್ಮಾಡಿ, ಪಂಚಾಯತ್ ಸದಸ್ಯ ಸಯ್ಯದ್ ಯಾಸೀನ್ ಉಪಸ್ಥಿತರಿದ್ದರು.