ಕುಂದಾಪುರ: ಕ್ರೀಡೆಗೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಿದೆ. ಹೆಮ್ಮಾಡಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಇಲ್ಲಿನ ಯುವಕರು ಇದನ್ನು ನಿರೂಪಿಸಿದ್ದಾರೆ. ಇಲ್ಲಿ ನಡೆಯುವ ಶಾರದೋತ್ಸವ, ಗಣೇಶೋತ್ಸವ, ಜಾತ್ರ ಮಹೋತ್ಸವಗಳಲ್ಲಿ ಯುವಕರೆಲ್ಲರೂ ಒಟ್ಟಾಗಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಬಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಶನಿವಾರ ಹೆಮ್ಮಾಡಿಯ ಸರಕಾರಿ ಹಿ.ಪ್ರಾ. ಶಾಲೆಯ ಮೈದಾನದಲ್ಲಿ ಎರಡು ದಿನಗಳ ನಡೆದ ಹೆಮ್ಮಾಡಿ ಪ್ರೀಮಿಯರ್ ಲೀಗ್ -೨೦೨೦ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಘಾಟಿಸಿದ ಕುಂದಾಪುರ ತಾ.ಪಂ. ಸದಸ್ಯ ರಾಜು ದೇವಾಡಿಗ ಮಾತನಾಡಿ, ಯುವಕರು ಸಂಘಟಿತರಾಗುವಲ್ಲಿ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದವರು ಹೇಳಿದರು.
ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಆನಂದ ಪಿ.ಎಚ್., ಸುಧಾಕರ ಎನ್. ದೇವಾಡಿಗ, ರಾಘವೇಂದ್ರ ಪೂಜಾರಿ, ನಿವೃತ್ತ ಶಿಕ್ಷಕ ಶಂಕರ ಮಡಿವಾಳ ಹೆಮ್ಮಾಡಿ, ಹೆಮ್ಮಾಡಿಯ ಕ್ರಿಕೆಟ್ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಯು. ಸತ್ಯನಾರಾಯಣ, ಬೆಂಗಳೂರಿನ ಉದ್ಯಮಿ ಸಂದೀಪ ಪೂಜಾರಿ ಕುರಿನಮನೆ, ಮತ್ತಿತರರು ಉಪಸ್ಥಿತರಿದ್ದರು.
೨ ದಿನಗಳ ಕಾಲ ನಡೆದ ಈ ಎಚ್ಪಿಎಲ್ ಎರಡನೇ ಆವೃತ್ತಿಯ ಕ್ರಿಕೆಟ್ ಟೂರ್ನಿಯಲ್ಲಿ ಹೆಮ್ಮಾಡಿ ಹಾಗೂ ಕಟ್ಬೇಲ್ತೂರು ಗ್ರಾಮಗಳ ೧೨ ತಂಡಗಳು ಭಾಗವಹಿಸಿದ್ದವು.
ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಸ್ವಾಗತಿಸಿ, ರಾಘವೇಂದ್ರ ಮಟಪಾಡಿ ಕಾರ್ಯಕ್ರಮ ನಿರ್ವಹಿಸಿದರು.