ಹೆಮ್ಮಾಡಿ ಆಟೋ ಚಾಲಕರ ಸಭೆ

ಹೆಮ್ಮಾಡಿ: ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಆಟೋ ಚಾಲಕರು ಪೊಲೀಸರಿಗೆ ಸಹಕಾರ ನೀಡಬೇಕು. ಹಗಲಿರುಳು ದುಡಿದು ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಒದಗಿಸುತ್ತಿರುವ ಆಟೋ ಚಾಲಕರ ಕಾರ್ಯ ಶ್ಲಾಘನೀಯವಾದುದು ಎಂದು ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಡಿ.ಆರ್ ಮಂಜಪ್ಪ ಹೇಳಿದರು.

ಅವರು ಸೋಮವಾರ ಬೆಳಿಗ್ಗೆ ಹೆಮ್ಮಾಡಿ ಆದರ್ಶ ಯುವಕ ಮಂಡಲದಲ್ಲಿ ನಡೆದ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿದರು.

ಅಪಘಾತ ಇನ್ನಿತರ ಘಟನೆಗಳು ನಡೆದಾಗ ಮೊದಲು ಸ್ಪಂದಿಸುವವರು ಆಟೋ ಚಾಲಕರು. ಹೀಗಾಗಿ ಆಟೊ ಚಾಲಕರು ಹಾಗೂ ಪೊಲೀಸರ ಮಧ್ಯೆ ಉತ್ತಮ ಬಾಂಧವ್ಯ ಇರುತ್ತದೆ. ಎಲ್ಲಾ ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಂಚಾರಿ ಠಾಣೆಯ ಪೊಲೀಸರು ಬೇಕಂತಲೇ ಹೆಮ್ಮಾಡಿ ನಿಲ್ದಾಣದಲ್ಲಿ ಕಾರ್ಯಾಚರಿಸುತ್ತಿರುವ ಆಟೋಗಳನ್ನು ಪದೇ ಪದೇ ತಪಾಸಣೆ ಮಾಡುತ್ತಿದ್ದಾರೆಂಬ ಆರೋಪಗಳು ಆಟೋಚಾಲಕರಿಂದ ಕೇಳಿ ಬಂದಿವೆ. ಪೊಲೀಸರು ಮತ್ತು ಆಟೋ ಚಾಲಕರ ನಡುವೆ ಭಿನ್ನಾಭಿಪ್ರಾಯಗಳುಂಟಾಗಿದ್ದು, ಇದನ್ನು ಬಗೆಹರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಡಿವೈಎಸ್‌ಪಿಯವರ ಸೂಚನೆ ಮೇರೆಗೆ ಈ ಸಭೆಯನ್ನು ಕರೆಯಲಾಗಿದೆ. ಸಂಚಾರಿ ಠಾಣೆಯ ಪೊಲೀಸರಿಗೆ ಆಟೋ ಚಾಲಕರ ಮೇಲೆ ವೈಯಕ್ತಿಕವಾಗಿ ಯಾವುದೇ ದ್ವೇಶವಿಲ್ಲ. ಕಾನೂನು ಮೀರಿದವರಿಗೆ ದಂಡ ವಿಧಿಸುವುದು ಪೊಲೀಸರ ಕರ್ತವ್ಯ. ನೀವೆಲ್ಲರೂ ರಸ್ತೆ ನಿಯಮಗಳನ್ನು ಪಾಲಿಸಿ ನಮ್ಮೊಂದಿಗೆ ಸಹಕರಿಸಬೇಕು ಎಂದ ಅವರು, ಪೊಲೀಸರು ತಪ್ಪು ಮಾಡಿದರೆ ಅದನ್ನು ವಿರೋಧಿಸಿ. ನ್ಯಾಯಯುತವಾಗಿ ಕೆಲಸ ಮಾಡಿದರೆ ಅವರ ಬೆಂಬಲಕ್ಕೆ ನಿಲ್ಲಿ ಎಂದರು.

ಈ ವೇಳೆಯಲ್ಲಿ ಕುಂದಾಪುರ ಸಂಚಾರಿ ಠಾಣೆಯ ಪಿಎಸ್‌ಐ ಪುಷ್ಪಾ ಮಾತನಾಡಿ, ಆಟೋ ಚಾಲಕರ ಮೇಲೆ ನಮಗೆ ದ್ವೇಷವಿಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಆಟೋ ಚಾಲಕರು ರಸ್ತೆ ನಿಯಮಗಳನ್ನು ಉಲ್ಲಂಘಿಸುವ ವೇಳೆ ದಂಡ ವಿಧಿಸುವಾಗ ನಮಗೂ ಬೇಸರವಾಗುತ್ತದೆ. ರಸ್ತೆ ನಿಯಮಗಳನ್ನು ಪಾಲಿಸದರೆ ದಂಡ ಕಟ್ಟುವುದು ತಪ್ಪುತ್ತದೆ. ಹೀಗಾಗಿ ಎಲ್ಲಾ ಆಟೋ ಚಾಲಕರು ರಸ್ತೆ ನಿಯಮಗಳನ್ನು ಪಾಲಿಸಲೇಬೇಕು ಎಂದರು.

ಹೆಮ್ಮಾಡಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮೊಗವೀರ ಮತನಾಡಿ, ಹೆಮ್ಮಾಡಿ ಪರಿಸರದಲ್ಲಿ ಅಪಘಾತಗಳು ನಡೆದಾಗ ಮೊದಲು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವವರು ಆಟೋ ಚಾಲಕರು. ದಿನದ ಇಪ್ಪತ್ತನಾಲ್ಕು ಗಂಟೆಯೂ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆಯನ್ನು ನೀಡುತ್ತಾ ಬಂದಿದ್ದೇವೆ ಎಂದರು.

ರಿಕ್ಷಾ ಚಾಲಕರಾದ ಜೇಮ್ಸ್, ಜಗನ್ನಾಥ್ ದೇವಾಡಿಗ, ಸಂತೋಷ್ ಕಟ್ಟು ಆಟೋ ಚಾಲಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ಸಭೆಯ ಗಮನ ಸೆಳೆದರು.

ಹೆಮ್ಮಾಡಿ, ಸಂತೋಷನಗರ, ಕಟ್‌ಬೇಲ್ತೂರು, ತೊಪ್ಲು ನಿಲ್ದಾಣದ ರಿಕ್ಷಾ ಚಾಲಕರು ಸಭೆಯಲ್ಲಿ ಉಪಸ್ಥಿತರಿದ್ದರು.