ಬೆಂಗಳೂರು: ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷತೆ ಖಚಿತಪಡಿಸಲು, 2022ರ ಕೇಂದ್ರೀಯ ಮೋಟಾರು ವಾಹನ ನಿಯಮಗಳನ್ನು ತಕ್ಷಣವೇ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
9 ತಿಂಗಳಿಂದ 4 ವರ್ಷದೊಳಗಿನ ಮಕ್ಕಳನ್ನು ಕರೆದೊಯ್ಯುವಾಗ ವಾಹನದ ವೇಗವನ್ನು 40ಕಿ.ಮೀ.ಗೆ ಸೀಮಿತಗೊಳಿಸಬೇಕು.
ಮಕ್ಕಳಿಗೆ ಸೇಫ್ಟಿ ಜಾಕೆಟ್ ಹಾಗೂ ಹೆಲ್ಮಟ್ ಕಡ್ಡಾಯವಾಗಿ ತೊಡಿಸಬೇಕು ಎಂಬ ನಿಯಮಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಮಕ್ಕಳಿಗೆ ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲು ನಿರ್ದೇಶಿಸುವಂತೆ ಕೋರಿ ಡಾ.ಅರ್ಚನಾ ಭಟ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಕೇಂದ್ರೀಯ ಮೋಟಾರು ವಾಹನ ನಿಯಮಗಳ ಜಾರಿಗೆ ಕ್ರಮ ಕೈಗೊಳ್ಳಲಾಗಿದ್ದರೂ ಪರಿಣಾಮಕಾರಿ ಅನುಷ್ಠಾನ ಆಗಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ನಿಯಮಗಳನ್ನು ಜಾರಿ ಮಾಡಲು ಮಕ್ಕಳ ಸುರಕ್ಷತಾ ಜಾಕೆಟ್ ಮತ್ತು ಹೆಲ್ಕೆಟ್ಗಳ ಕೊರತೆಯಿದೆ. ಇದರ ಉತ್ಪಾದನೆಗೆ ಐದರಿಂದ ಆರು ತಿಂಗಳ ಕಾಲಾವಕಾಶ ಬೇಕು ಎಂದು ಉತ್ಪಾದಕರು ತಿಳಿಸಿದ್ದಾರೆ ಎಂದು ಸರ್ಕಾರ ತಿಳಿಸಿತ್ತು. ಇದನ್ನು ಪರಿಗಣಿಸಿರುವ ಹೈಕೋರ್ಟ್, ಆದಷ್ಟು ಬೇಗ ಆದ್ಯತೆ ಮೇರೆಗೆ 6 ತಿಂಗಳೊಳಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.


















