ಹೆಜಮಾಡಿ ದುಬಾರಿ ಟೋಲ್ ದರ 40% ಕಮೀಷನ್ ನ ಮತ್ತೊಂದು ಉದಾಹರಣೆ: ವೆರೋನಿಕಾ ಕರ್ನೆಲಿಯೋ

ಮಂಗಳೂರು: ಕಳೆದ ಹಲವು ವರ್ಷಗಳಿಂದ ಎಡೆಬಿಡದೆ ಹೋರಾಟ ನಡೆಸಿ ಸುರತ್ಕಲ್‌ ಟೋಲ್‌ಗೇಟ್‌ ಅನ್ನು ತೆರವುಗೊಳಿಸಿದರೂ ಈಗ ಅದನ್ನು ಹೆಜಮಾಡಿ ಟೋಲ್‌ ಪ್ಲಾಝಾ ಜತೆ ವಿಲೀನಗೊಳಿಸಿದ್ದಲ್ಲದೆ ದುಬಾರಿ ಟೋಲ್ ದರ ಇಟ್ಟಿರುವುದು ಸಂಸದ ನಳಿನ್ ಕುಮಾರ್ ಕಟೀಲ್ ಅವರ 40% ಕಮೀಷನ್ ಗೆ ಮತ್ತೊಂದು ಉದಾಹರಣೆಯಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಕಿಡಿ ಕಾರಿದ್ದಾರೆ.

ಸಂಸದ ನಳಿನ್ ಕುಮಾರ್ ಇತ್ತೀಚೆಗೆ ಟ್ವೀಟ್ ಮಾಡಿ ಸುರತ್ಕಲ್ ಟೋಲ್ ರದ್ದು ಮಾಡಿದ್ದಕ್ಕಾಗಿ ಕೇಂದ್ರ ಭೂಸಾರಿಗೆ ಸಚಿವರಿಗೆ ಧನ್ಯವಾದ ಅರ್ಪಿಸಿದ್ದಾರೆ ಆದರೆ ಸುರತ್ಕಲ್ ಟೋಲ್ ರದ್ದು ಮಾಡದೆ ಅದನ್ನು ಹೆಜಮಾಡಿ ಟೋಲ್ ಪ್ಲಾಜಾ ಜತೆ ವಿಲೀನಗೊಳಿಸಿರುವುದು ಕರಾವಳಿಯ ಜನರಿಗೆ ಮಾಡಿದ ಬಹುದೊಡ್ಡ ದ್ರೋಹವಾಗಿದೆ ಎಂದು ಅವರು ಹೇಳಿದ್ದಾರೆ.

ದುಬಾರಿ ಟೋಲ್ ದರವನ್ನು ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ವಿಧಿಸಿ ಜನರನ್ನು ಲೂಟಿ ಮಾಡಲು ಹೊರಟಿರುವ ಬಿಜೆಪಿಯ ವರ್ತನೆಗೆ ಅವರ ಬೆಂಬಲಿಗರು ಏನು ಹೇಳುತ್ತಾರೆ? ಏನೇ ಮಾಡಿದರೂ ದೇಶಕ್ಕಾಗಿ ಎನ್ನುವ ಬಿಜೆಪಿಯೆ ವಾಹನ ಸವಾರರಿಂದ ಪ್ರತಿನಿತ್ಯ ಟೋಲ್ ರೂಪದಲ್ಲಿ ಹಣ ಲೂಟಿ ಮಾಡಿ ಕೇಂದ್ರ ಸರಕಾರಕ್ಕೆ 40% ಕಮೀಷನ್ ನೀಡಲು ಹೊರಟಿದ್ದಾರೆಯೇ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ ಎಂದ ಅವರು, ಇಲ್ಲಿವರೆಗೆ ಹೋರಾಟ ಸುರತ್ಕಲ್ ಗೆ ಸೀಮಿತವಾಗಿದ್ದು ಇನ್ನು ಮುಂದೆ ಹೆಜಮಾಡಿಗೆ ಸ್ಥಳಾಂತರವಾಗಲಿದೆ. ಈ ಭಾಗದ ಸಂಸದೆ ಶಾಸಕರು ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕಾಗಿದೆ. ಬಿಜೆಪಿ ಶಾಸಕರು ಜನವಿರೋಧಿ ವಿಚಾರ ಬಂದಾಗ ಮುಂದೆ ಅತ್ತಂತೆ ಮಾಡಿ, ಹಿಂದಿನಿಂದ ಬೆಂಬಲಿಸುವ ಜಾಯಮಾನವನ್ನು ಬಿಟ್ಟು ಪಕ್ಷಬೇಧ ಮರೆತು ಹೋರಾಟಕ್ಕೆ ಕೈಜೋಡಿಸಲಿ ಆಗ ಅವರ ಬಡ ಜನರ ಪ್ರೀತಿಯ ನೈಜತೆ ಗೊತ್ತಾಗಲಿದೆ. ತಕ್ಷಣವೆ ಹೆದ್ದಾರಿ ಪ್ರಾಧಿಕಾರ ಹೊರಡಿಸಿರುವ ಪರಿಷ್ಕೃತ ಟೋಲ್ ದರವನ್ನು ಹಿಂಪಡೆದು ಎಲ್ಲರೂ ಒಪ್ಪುವ ದರವನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.