ಹೆಬ್ರಿ ಎಸ್ ಆರ್ ಪದವಿ ಪೂರ್ವ ಕಾಲೇಜಿನಲ್ಲಿ ಅನ್ವೇಷಣಾಂ – 25 ಕಾರ್ಯಕ್ರಮ

ಹೆಬ್ರಿ: ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಎಸ್ ಆರ್ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಅನ್ವೇಷಣಾಂ – 25 ಕಾರ್ಯಕ್ರಮವು ಶನಿವಾರ ಯಶಸ್ವಿಯಾಗಿ ನೆರವೇರಿತು.

ಕೈಯಲ್ಲಿರುವ ಬೆರಳುಗಳು ಒಂದೇ ಸಮನಾಗಿರುವುದಿಲ್ಲ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸುಪ್ತವಾದ ಪ್ರತಿಭೆ ಅಡಗಿದೆ, ಅದು ಪ್ರಕಟಗೊಳ್ಳಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಅಂಕಗಳನ್ನು ಗಳಿಸುವ ಜೊತೆಯಲ್ಲೇ ಗುರುಗಳನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಅಡಗಿರುವ ಪ್ರತಿಭೆಯನ್ನು ಸಾಬೀತುಪಡಿಸಲು ಸಿಗುವ ಅವಕಾಶವನ್ನು ಬಳಸಿಕೊಳ್ಳಬೇಕು. ಸಮಾಜಕ್ಕೆ ಆಸ್ತಿಯಾಗಬೇಕು ಎಂದು ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ್ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಮ್ಮನ ನೆರವು ಟ್ರಸ್ಟಿನ ಸ್ಥಾಪಕರಾದ ಅವಿನಾಶ್ ಶೆಟ್ಟಿಯವರು, ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಗುರಿ ಇರುತ್ತದೆ ಆ ಗುರಿಯನ್ನು ಮುಟ್ಟಲು ಶ್ರಮ ಪಡಬೇಕು. ಪ್ರತಿಭೆಯನ್ನು ಬಚ್ಚಿಡದೆ ಅದನ್ನು ಬಳಸಿಕೊಳ್ಳಬೇಕು. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ನೀವೇನೇ ಸಾಧನೆ ಮಾಡಿದರೂ ನಿಮಗಿಂತ ಸಂತೋಷ ಪಡುವವರು ಹೆತ್ತವರು. ಪ್ರತಿಭೆಯನ್ನು ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳನ್ನು ಕುರಿತು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಮತಿ ಸಪ್ನಾ ಎನ್ ಶೆಟ್ಟಿಯವರೂ ಮಾತನಾಡುತ್ತ ಪ್ರತಿಭೆಯನ್ನು ಹೊರಹಾಕಲು ಸಿಕ್ಕ ವೇದಿಕೆಯನ್ನು ಬಳಸಿಕೊಳ್ಳಿ. ಆದರ್ಶ ವ್ಯಕ್ತಿಗಳನ್ನು ನಿಮ್ಮ ಮಾದರಿಯನ್ನಾಗಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕರಾದ ಅಮೃತ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ಯಾಮಿಲಿ ನಿರೂಪಿಸಿ, ಖಾಝಿ ಇಲ್ಹಾಮ್ ವಂದಿಸಿ , ಐಶ್ವರ್ಯ ಅತಿಥಿ ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಮೆರೆದರು. ಏಕನೃತ್ಯ, ಗುಂಪು ನೃತ್ಯ, ಏಕಗಾನ, ಗುಂಪುಗಾನ, ಮ್ಯಾಡ್ ಆಡ್, ಮಿಮಿಕ್ರಿ, ಕವನ ವಾಚನ, ನಾಟಕ ಮುಂತಾದ ಹಲವು ಸ್ಪರ್ಧೆಗಳು ಜರುಗಿದವು. ಕೆಲ ವಿದ್ಯಾರ್ಥಿಗಳು ತಮಾಷೆಯ ಅಭಿನಯದ ಮೂಲಕ ವೇದಿಕೆಯನ್ನು ಕಂಗೊಳಿಸಿದರೆ, ಕೆಲವರು ತಮ್ಮ ಸಾಂಪ್ರದಾಯಿಕ ನೃತ್ಯದ ಮೂಲಕ ಮನಸ್ಸು ಗೆದ್ದರು.