ಹೆಬ್ರಿಯ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯಿಂದ ಪೊಲೀಸ್ ಇಲಾಖೆಗೆ ಬ್ಯಾರಿಕೇಡ್ ಹಸ್ತಾಂತರ.

ಹೆಬ್ರಿ: ಹೆಬ್ರಿಯ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಎಸ್ ಆರ್ ಆಡಿಯಟೋರಿಯಂನಲ್ಲಿ “ಪೊಲೀಸ್ ಬ್ಯಾರಿಕೇಡ್ ಹಸ್ತಾಂತರ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ” ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರವಿ ಬಿ ಕೆ ಪಿಎಸ್ಐ, ಹೆಬ್ರಿ ಪೊಲೀಸ್ ಠಾಣೆ ಭಾಗವಹಿಸಿ ಮಾತನಾಡಿದರು. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಾವಶ್ಯಕ ಎಂದು ಅವರು ತಿಳಿಸಿದರು. ಹೆಲ್ಮೆಟ್ ಧರಿಸುವುದು, ಸೀಟ್‌ಬೆಲ್ಟ್ ಕಡ್ಡಾಯವಾಗಿ ಬಳಸುವುದು ಹಾಗೂ ಮದ್ಯಪಾನದ ನಂತರ ವಾಹನ ಚಾಲನೆ ಮಾಡದಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅತಿಥಿಯಾಗಿ ಸತೀಶ ಕುಲಾಲ್ ಅಧ್ಯಕ್ಷರು, ಜೆಸಿಐ ಹೆಬ್ರಿ ಉಪಸ್ಥಿತರಿದ್ದು, ಯುವಜನರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಾಜ್ ಶೆಟ್ಟಿ ಅಧ್ಯಕ್ಷರು, ಎಸ್‌ ಆರ್ ಸಮೂಹ ಶಿಕ್ಷಣ ಸಂಸ್ಥೆ, ಹೆಬ್ರಿ ವಹಿಸಿದ್ದರು. ವಿದ್ಯಾರ್ಥಿಗಳು ಪೋಷಕರ ಕಷ್ಟವನ್ನು ಅರಿತು ಓದುವ ಕಡೆ ಹೆಚ್ಚು ಗಮನ ಹರಿಸಬೇಕು. ಶಿಕ್ಷಣ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಕೈಜೋಡಿಸುವಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹೆಬ್ರಿ ಪೊಲೀಸ್ ಠಾಣೆಗೆ ಸಂಸ್ಥೆಯ ವತಿಯಿಂದ ಬ್ಯಾರಿಕೇಡ್‌ಗಳನ್ನು ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ ಎಚ್, ಎಸ್ ಆರ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಭಗವತಿ ಉಪಪ್ರಾಂಶುಪಾಲರಾದ ದೀಪಕ್ ಎನ್, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಸಮಾಜದಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿತು. ಕಾರ್ಯಕ್ರಮವನ್ನು ಭೌತಶಾಸ್ತ್ರ ಉಪನ್ಯಾಸಕಿ ಗೀತಾ ಪ್ರಭು ನಿರೂಪಿಸಿ ವಂದಿಸಿದರು.