ಹೆಬ್ರಿ: ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಪತಿಯನ್ನು ಪತ್ನಿಯೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಎ.30ರಂದು ಮಧ್ಯಾಹ್ನ ವೇಳೆ ನಾಲ್ಕೂರು ಎಂಬಲ್ಲಿ ನಡೆದಿದೆ.
ಮೃತರನ್ನು ನಾಲ್ಕೂರು ನಿವಾಸಿ ಗಣಪತಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಮೃತರ ಪತ್ನಿ ಜಯಂತಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಗಣಪತಿ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಹೆಂಡತಿಯೊಂದಿಗೆ ಗಲಾಟೆ ಮಾಡುತ್ತಿದ್ದರು. ಎ.30ರಂದು ಕೂಡ ಗಣಪತಿ ಹಾಗೂ ಜಯಂತಿ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಕೋಪ ಗೊಂಡ ಜಯಂತಿ ಮನೆಯ ಹಿಂಭಾಗ ನಲ್ಲಿಕಟ್ಟೆ ಬಳಿ ಗಣಪತಿ ಕುತ್ತಿಗೆಗೆ ಕತ್ತಿಯಿಂದ ಕಡಿದರೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಗಣಪತಿ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಕುಡಿಯಲು ಹೆಂಡತಿಯಲ್ಲಿ ಹಣ ಕೇಳಿದ ವಿಚಾರದಲ್ಲಿ ಗಣಪತಿ ಹಾಗು ಜಯಂತಿ ಮಧ್ಯೆ ಗಲಾಟೆಯಾಗಿ ಜಯಂತಿ ಕತ್ತಿಯಿಂದ ಗಣಪತಿ ಕುತ್ತಿಗೆ ಕಡಿದು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.












