ಹೆಬ್ರಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ನಿರಂತರವಾಗಿ ವೇದಿಕೆ ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಚಾಣಕ್ಯ ಸಂಸ್ಥೆಯ ಪರಿಶ್ರಮ ಶ್ಲಾಘನೀಯ ಎಂದು ಹೆಬ್ರಿ -ಅಜೆಕಾರು ವಲಯ ಬಂಟರ ಸಂಘದ ಅಧ್ಯಕ್ಷ ಬಿ. ಹರ್ಷ ಶೆಟ್ಟಿ ಹೇಳಿದರು.
ಅವರು ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಚಾಣಕ್ಯ ಚಿತ್ರಕಲಾ ತರಬೇತಿ ಕೇಂದ್ರ ಹೆಬ್ರಿ ಇದರ ನೇತೃತ್ವದಲ್ಲಿ ನೇತಾಜಿ ಫ್ರೆಂಡ್ಸ್ ಕ್ಲಬ್ ಮುದ್ರಾಡಿ , ಬಂಟರ ಸಂಘ ಹೆಬ್ರಿ, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ಜೆಸಿಐ ಹೆಬ್ರಿ ಇವರ ಸಹಯೋಗದೊಂದಿಗೆ ಹೆಬ್ರಿ ಬಂಟರ ಭವನದಲ್ಲಿ ನಡೆದ ನಡೆದ 9ನೇ ವರ್ಷದ ಹೆಬ್ರಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತ ಚಿತ್ರಕಲಾ ತರಬೇತಿಯನ್ನು ನೀಡಿ ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿರು ವುದು ಮಾದರಿ ಕಾರ್ಯ ಎಂದು ಮುದ್ರಾಡಿ ನೇತಾಜಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಸಂತೋಷ್ ಪೂಜಾರಿ ಬಲ್ಲಾಡಿ ಹೇಳಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರಲು ಪೋಷಕರ ಪ್ರೋತ್ಸಾಹ ಅತಿ ಅಗತ್ಯ ಎಂದು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಆಶಾ ಬಿ.ಶೆಟ್ಟಿ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ವಹಿಸಿದ್ದರು. ಸಮಾರಂಭದಲ್ಲಿ ಮೂಡಬಿದ್ರೆ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ, ಉದ್ಯಮಿ ಸುಕೇಶ್ ಶೆಟ್ಟಿ, ಚಿತ್ರಕಲಾ ಶಿಕ್ಷಕ ರಾಧಾಕೃಷ್ಣ,ನೇತಾಜಿ ಫ್ರೆಂಡ್ಸ್ ಕ್ಲಬ್ ನ ಪ್ರಶಾಂತ್ ಪೈ, ವಿಶುಕುಮಾರ್, ನಿತ್ಯಾನಂದ ಭಟ್, ಆಶಾ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ,ಹೆಬ್ರಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಹೆಬ್ರಿ ಜೆಸಿಐ ಅಧ್ಯಕ್ಷೆ ಸೋನಿ ಪಿ. ಶೆಟ್ಟಿ ವಂದಿಸಿದರು.
ಹೆಬ್ರಿ ತಾಲೂಕು ವ್ಯಾಪ್ತಿಯ ಸುಮಾರು 90ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಿತು. ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಹರ್ಷ ಶೆಟ್ಟಿ ಅವರ ವತಿಯಿಂದ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಾಗೂ ಪೆನ್ಸಿಲನ್ನು ನೀಡಿ ಪ್ರೋತ್ಸಾಹಿಸಲಾಯಿತು.
















