ಹೆಬ್ರಿ: ಕಾಲೇಜು ಜಾಗದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ವಿರೋಧಿಸಿ ಹೋರಾಟಕ್ಕೆ ಸಿದ್ದತೆ

ಉಡುಪಿ: ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಾಗವನ್ನು ಬಲಿಕೊಡುವ ಷಡ್ಯಂತ್ರ ನಡೆಯುತ್ತಿದ್ದು, ಇದರ ವಿರುದ್ಧ ವಿದ್ಯಾರ್ಥಿ ಸಂಘಟನೆ ಹಾಗೂ ಕಾಲೇಜು ಉಳಿಸಿ ಹೋರಾಟ ಸಮಿತಿ ಹೋರಾಟಕ್ಕೆ ಮುಂದಾಗಿದೆ ಎಂದು ಕಾಲೇಜು ಉಳಿಸಿ ಹೋರಾಟ ಸಮಿತಿ ಮುಖಂಡ ಶ್ರೀಧರ್ ಶೆಟ್ಟಿ, ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೆಬ್ರಿ ಕಾಲೇಜು ಆವರಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸಾಕಷ್ಟು ವಿರೋಧವಿದೆ. ಈ ಬಗ್ಗೆ ಶಾಸಕರಿಗೆ, ಜಿಲ್ಲಾಡಳಿತಕ್ಕೆ ಮನವಿಕೊಟ್ಟು ವಾಸ್ತವತೆಯ ಬಗ್ಗೆ ಮನವರಿಕೆ ಮಾಡಲಾಗಿದೆ. ಆದರೆ ಯಾವುದೇ ಪೂರಕ ಸ್ಪಂದನೆ ಸಿಕ್ಕಿಲ್ಲ. ಈ ಹಿಂದೆ ಕಾಲೇಜಿನ 7 ಎಕರೆ ಜಾಗ ಒತ್ತುವರಿಯಾಗಿದ್ದು, ಮತ್ತೆ 5 ಎಕರೆ ಜಾಗವನ್ನು ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ಮಿನಿ ವಿಧಾನ ಸೌಧಕ್ಕಾಗಿ ಕೆಲ ವರ್ಷಗಳ ಹಿಂದೆ ಚಾರಾದಲ್ಲಿ 11.35 ಎಕರೆ ಜಾಗ ಗುರುತಿಸಲಾಗಿತ್ತು. ಆದರೆ ಕಾರ್ಕಳ ಶಾಸಕರು ಕಾಲೇಜು ಆವರಣದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಹೆಚ್ಚು ಉತ್ಸಾಕತೆ ತೋರುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.

32 ಎಕರೆ ಜಾಗ ಹೊಂದಿರುವ ಸರ್ಕಾರಿ ಕಾಲೇಜು ಜಾಗದಲ್ಲಿ ಈಗಾಗಲೇ 7 ಎಕರೆ ಜಾಗ ಒತ್ತುವರಿಯಾಗಿದೆ. ಉಳಿದ 25.12 ಎಕರೆ ಜಾಗದಲ್ಲಿ 5 ಎಕರೆ ಮಿನಿ ವಿಧಾನ ಸೌಧಕ್ಕೆ ಹೋದರೆ ಕಾಲೇಜಿಗೆ ಜಾಗ ಕಡಿಮೆಯಾಗುತ್ತದೆ. ಕಾಲೇಜಿನ ವಿಸ್ತರಣೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗೆ ಸಮಸ್ಯೆ ಆಗುತ್ತದೆ. ಹಾಗಾಗಿ ಜಿಲ್ಲಾಡಳಿತ, ಶಾಸಕರು ಈ ಬಗ್ಗೆ ಪೂರಕವಾಗಿ ಸ್ಪಂದಿಸಿ, ಕಾಲೇಜು ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸುಮಂತ್‌ ಶೆಟ್ಟಿ ಮಾತನಾಡಿ, ಕಾಲೇಜು ಜಾಗದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣವಾದರೆ ಮಕ್ಕಳ ಓದಿಗೆ ತೊಂದರೆ ಆಗುತ್ತದೆ. ರಾಜಕೀಯ ವ್ಯಕ್ತಿಗಳು, ರೈತ ಪ್ರತಿಭಟನೆ, ಧರಣಿ ಸತ್ಯಾಗ್ರಹ ನಡೆದಂತಹ ಸಂದರ್ಭದಲ್ಲಿ ಮಕ್ಕಳ ಸಮಸ್ಯೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮಿನಿ ವಿಧಾನಸೌಧ ನಿರ್ಮಾಣ ಮಾಡಬಾರದು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ವಿದ್ಯಾರ್ಥಿ ಪ್ರಮುಖರಾದ ಹೇಮಂತ್‌ ಶೆಟ್ಟಿ, ಅಕ್ಷಯ್‌ ನಾಯ್ಕ್‌, ಸೂರಜ್‌ ಇಂದ್ರಾಳಿ, ಸ್ಥಳೀಯರಾದ ವಿಜಯ್‌ ಇದ್ದರು.