ಉಡುಪಿ/ ಮಂಗಳೂರು: ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಉಡುಪಿ ಹಾಗೂ ಮಂಗಳೂರಿನ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ಥವಾಗಿದ್ದಲ್ಲದೆ, ಅಲ್ಲಲ್ಲಿ, ಮರ-ಮನೆಮಟ್ಟುಗಳು ಉರುಳಿ ಹಲವರು ಪ್ರಾಣ ಕಳೆದುಕೊಂಡ ಘಟನೆಗಳು ವರದಿಯಾಗಿವೆ. ಇದರ ಜೊತೆಗೆ ಧಾರಾಕಾರ ಮಳೆಯಿಂದಾಗಿ ಮುಲ್ಕಿ-ಮಂಗಳೂರು ಹಾಗೂ ನಂತೂರು-ಬಿ.ಸಿ ರೋಡು ರಾ.ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ಕಾಣಿಸಿಕೊಂಡಿದ್ದು ಅಪಾಯಕ್ಕೆ ಆಹ್ವಾನವೀಯುತ್ತಿದೆ.
ಕುಂದಾಪುರ-ಉಡುಪಿ-ಮುಲ್ಕಿ ಮಾರ್ಗವಾಗಿ ಹಲವಾರು ವಾಹನಗಳು ಮಂಗಳೂರಿಗೆ ಪ್ರಯಾಣಿಸುತ್ತವೆ. ನಿತ್ಯ ಸಂಚಾರ ನಡೆಸುವ ಈ ವಾಹನಗಳು ರಾ.ಹೆದ್ದಾರಿಯ ಹೊಂಡ ಗುಂಡಿಗಳನ್ನು ತಪ್ಪಿಸಿಕೊಂಡು ಚಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಂಗಳೂರಿನ ಜನನಿಬಿಡ ನಂತೂರು ಜಂಕ್ಷನ್‌ನಲ್ಲಿ ಹಲವಾರು ಅಪಘಾತಗಳು ಸಂಭವಿಸಿವೆ. ಹಲವು ದ್ವಿಚಕ್ರ ವಾಹನ ಸವಾರರು ಹೊಂಡ ಗುಂಡಿಗಳಿಂದಾಗಿ ಆಯ ತಪ್ಪಿ ಬಿದ್ದು ಸಣ್ಣ ಪುಟ್ಟ ಗಾಯ ಹಾಗೂ ಮೂಳೆ ಮುರಿತಕ್ಕೂ ಒಳಗಾಗಿದ್ದಾರೆ.
ರಾ.ಹೆದ್ದಾರಿಯ ಕಾಮಗಾರಿಗಳ ನೈಜ ಮುಖದ ದರ್ಶನ ಜನರಿಗೆ ಇದೀಗ ಎದುರಾಗುತ್ತಿದೆ. ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ತೆರಿಗೆ ವಸೂಲಿ ಮಾಡಿ ರಸ್ತೆಗಳನ್ನು ನಿರ್ಮಾಣ ಮಾಡಿದರೂ, ಒಂದೆರಡು ವರ್ಷಗಳಲ್ಲೇ ಹೊಂಡ ಗುಂಡಿ ಬೀಳುವ ರಾ.ಹೆದ್ದಾರಿಗಳನ್ನು ಕಂಡು ಜನರು ಹೈರಾಣಾಗಿದ್ದಾರೆ. ಅಪಾಯಕ್ಕೆ ಆಹ್ವಾನವೀಯುವ ಈ ಹೊಂಡ ಗುಂಡಿಯುಕ್ತ ಹೆದ್ದಾರಿಗಳನ್ನು ಶೀಘ್ರದಲ್ಲೇ ಸರಿ ಪಡಿಸಿದಲ್ಲಿ ಮುಂದಾಗುವ ಭಾರೀ ಅನಾಹುತಗಳನ್ನು ತಪ್ಪಿಸಬಹುದು. ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸುವುದು ಒಳಿತು.