ವರುಣನ ಅಬ್ಬರಕ್ಕೆ ತತ್ತರಿಸಿದ ದಕ್ಷಿಣ ಕನ್ನಡ ಜಿಲ್ಲೆ; ಮನೆ ಮಠ ಕಳೆದುಕೊಂಡು ಅಸ್ತವ್ಯಸ್ತವಾಯಿತು ಜನಜೀವನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆ ಫಟ್ಟ ಪ್ರದೇಶದ ತಪ್ಪಲಿನಲ್ಲಿರುವ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು, ಬಾಳುಗೋಡು, ಹರಿಹರಪಳ್ಳತ್ತಡ್ಕ ಮೊದಲಾದ ಭಾಗದಲ್ಲಿ ಹಲವು ಅನಾಹುತಗಳಿಗೆ ಕಾರಣವಾಗಿದೆ. ಕಲ್ಮಕಾರು, ಕಡಮಕಲ್ಲು ಮೊದಲಾದ ಬೆಟ್ಟಗಳಲ್ಲಿ ಉಂಟಾದ ‌ ಮೇಘಸ್ಪೋಟದಿಂದಾಗಿ ಈ ಭಾಗದ ಹೆಚ್ಚಿನ ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಮನೆ ಮೇಲೆ ಗುಡ್ಡ ಜರಿದು ಇಬ್ಬರು ಮಕ್ಕಳು ಮೃತಪಟ್ಟಿದ್ದು, ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ಇಲ್ಲಿನ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪಕ್ಕದಲ್ಲಿ ಹರಿಯುವ ದರ್ಪಣ ತೀರ್ಥ ಉಕ್ಕಿ ಹರಿದ ಪರಿಣಾಮವಾಗಿ ಆದಿ ಸುಬ್ರಹ್ಮಣ್ಯ ಕ್ಷೇತ್ರ ಭಾಗಶಃ ಮುಳುಗಿದೆ. ದರ್ಪಣ ತೀರ್ಥ ಹೊಳೆಯ ನೀರು ಆದಿ ಸುಬ್ರಹ್ಮಣ್ಯ ಕ್ಷೇತ್ರದ ಒಳಗೂ ಹರಿದ ಪರಿಣಾಮವಾಗಿ ಕಸ ಕಡ್ಡಿ, ಮಣ್ಣಿನ ರಾಶಿ ಕ್ಷೇತ್ರದ ಒಳಗೆ ಸೇರಿಕೊಂಡಿದ್ದು, ಕ್ಷೇತ್ರದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮಣ್ಣನ್ನು ಶುಚಿಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ತಡರಾತ್ರಿ ಸುಮಾರು 1.30 ರ ವೇಳೆಗೆ ಕಲ್ಮಕಾರು, ಕಡಮಕಲ್ಲು ಬೆಟ್ಟದಿಂದ ಹರಿದ ಭಾರೀ ಪ್ರಮಾಣದ ನೀರು ಹರಿಹರಪಳ್ಳತ್ತಡ್ಕ, ಕೊಲ್ಲಮೊಗರು, ಕಲ್ಮಕಾರು ಭಾಗದ ಹಲವು ಮನೆಗಳಿಗೆ ಹಾನಿ ಮಾಡಿದೆ. ಹತ್ತಕ್ಕೂ ಮಿಕ್ಕಿದ ಅಂಗಡಿಗಳು ಸಂಪೂರ್ಣ ನಾಶವಾಗಿದ್ದು, ಹಲವು ಕುಟುಂಬಗಳು ದಿಕ್ಕಿಲ್ಲದೆ ಬೀದಿ ಪಾಲಾಗಿವೆ. ಹರಿಹರಪಳ್ಳತ್ತಡ್ಕ ಪೇಟೆಯಲ್ಲಿ ಹೋಟೆಲ್ ನಡೆಸಿಕೊಂಡಿದ್ದ ಪ್ರಕಾಶ್ ಎನ್ನುವವರಿಗೆ ಸೇರಿದ ಕಟ್ಟಡ ಸಂಪೂರ್ಣವಾಗಿ ನದಿ ಪಾಲಾಗಿದೆ. ರಾತ್ರಿ12 ಗಂಟೆವರೆಗೆ ಇದ್ದ ಹೋಟೆಲ್ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ಇಲ್ಲದಂತಾಗಿದೆ. ಹರಿಹರಪಳ್ಳತ್ತಡ್ಕ ಹೊಳೆಯ ಪಕ್ಕದಲ್ಲಿರುವ ಹಲವು ಮನೆ ಹಾಗೂ ಅಂಗಡಿಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಆ ಭಾಗದ ಎಲ್ಲಾ ಅಂಗಡಿಗಳಿಗೆ ಭಾರೀ ನಷ್ಟವಾಗಿದೆ. ಪ್ರವಾಹದ ನೀರಿನ ಜೊತೆಗೆ ಬೃಹತ್ ಗಾತ್ರದ ಮರಗಳೂ ಹರಿದು ಬಂದ ಕಾರಣ ಹಲವಾರು ಸೇತುವೆಗಳು ನಾಶವಾಗಿದೆ‌. ಹರಿಹರಪಳ್ಳತ್ತಡ್ಕ- ಬಾಳುಗೋಡು ಸಂಪರ್ಕಿಸುವ ಸೇತುವೆ ಹಾಗು ರಸ್ತೆ ಕುಸಿದಿದ್ದು, ಘನ ವಾಹನಗಳು ಸಂಚರಿಸಲು ಯೋಗ್ಯವಿಲ್ಲದಾಂತಾಗಿದೆ.

ಕಲ್ಮಕಾರು,ಕೊಪ್ಪ, ಶೆಟ್ಟಿಕಟ್ಟ ಮೊದಲಾದ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆಯ ಒಂದು ಭಾಗ ನೀರಿಗೆ ಕೊಚ್ಚಿಹೋದ ಪರಿಣಾಮ ಮುನ್ನೂರಕ್ಕೂ ಮಿಕ್ಕಿದ ಮನೆಗಳ ಸಂಪರ್ಕ ಕಡಿತವಾಗಿದೆ. ಕಲ್ಮಕಾರು ಪೇಟೆ ಸಂಪರ್ಕಿಸಲು ಹಾಗೂ ಇತರ ಭಾಗಗಳಿಗೆ ತೆರಳಲು ಯಾವುದೇ ಪರ್ಯಾಯ ಮಾರ್ಗವಿಲ್ಲದೆ ಈ ಭಾಗದ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ತಾತ್ಕಾಲಿಕವಾಗಿ ಅಡಿಕೆಯ ಮರದಿಂದ ಕಾಲುಸೇತುವೆ ನಿರ್ಮಿಸಿ ತಮ್ಮ ಮನೆಗಳಿಗೆ ತೆರಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರವಾಹದ ನೀರಿನಿಂದಾಗಿ ನೂರಾರು ಎಕರೆ ಕೃಷಿ ಭೂಮಿಯೂ ನಾಶವಾಗಿದ್ದು, ಅಡಿಕೆ ಹಾಗು ತೆಂಗು ಫಸಲು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ.

ಪ್ರವಾಹದಿಂದ ಹೆಚ್ಚಿನ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಸಚಿವ ಎಸ್.ಅಂಗಾರ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದಾಗಿ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ಒದಗಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಾಲ್ಕು ಗ್ರಾಮಗಳಲ್ಲಿ ಆದ ಈ ನಷ್ಟವನ್ನು ಅಂದಾಜಿಸಿ ತಕ್ಷಣವೇ ತಮ್ಮ ಗಮನಕ್ಕೆ ತರಬೇಕು. ಅಧಿಕಾರಿಗಳ ವರದಿಯನ್ನು ಪರಿಶೀಲಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಜನತೆ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಸರಕಾರ ನಿಮ್ಮ ಜೊತೆಗಿದೆ. ಅನಿವಾರ್ಯ ಸಂದರ್ಭದಲ್ಲಿ ಅಪಾಯದಲ್ಲಿರುವ ಮನೆ ಮಂದಿಯನ್ನು ಜಿಲ್ಲಾಡಳಿತ ಬೇರೆ ಕಡೆಗಳಿಗೆ ಸ್ಥಳಾಂತರಿಸುವ ಕೆಲಸ ಮಾಡಲಿದ್ದು, ಜನತೆ ಅಧಿಕಾರಿಗಳ ಜೊತೆ ಸ್ಪಂದಿಸಬೇಕೆಂದು ಮನವಿ ಮಾಡಿದ್ದಾರೆ‌. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯಲ್ಲಿ ಮನೆ ಮೇಲೆ ಗುಡ್ಡ ಜರಿದು ಮೃತಪಟ್ಟ ಮಕ್ಕಳ ಕುಟುಂಬಕ್ಕೂ ಪರಿಹಾರವನ್ನು ತಕ್ಷಣ ನೀಡಲಾಗುವುದು ಎಂದು ಸಚಿವ ಅಂಗಾರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಖುದ್ದು ಹಾನಿಯ ಪರಿಶೀಲನೆಯನ್ನು ನಡೆಸಿದ್ದು, ಹಾನಿಗೊಳಗಾದ ವರದಿಯನ್ನು ತಕ್ಷಣ ತಯಾರಿಸಿ ತನ್ನ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವರದಿ ಬಂದ ತಕ್ಷಣವೇ ಸಂತ್ರಸ್ತರಿಗೆ ಪರಿಹಾರವನ್ನು ವಿತರಿಸಲಾಗುವುದು ಎಂದಿದ್ದಾರೆ.

ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಸುದ್ದಿ ಕೃಪೆ: ನ್ಯೂಸ್ 18 ಕನ್ನಡ