ಪ್ರಾಕೃತಿಕ ವಿಕೋಪ : ತಕ್ಷಣ ಸ್ಪಂದಿಸಿ, ಗರಿಷ್ಠ ನೆರವು ನೀಡಿ: ಶೋಭಾ ಕರಂದ್ಲಾಜೆ

 ಉಡುಪಿ: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜೀವ ಹಾನಿ ಮತ್ತು ಆಸ್ತಿ ಪಾಸ್ತಿ ನಷ್ಟಕ್ಕೊಳಗಾದವರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ,  ಅಗತ್ಯ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಿ, ಪರಿಹಾರ ವಿತರಣೆ ಸಂದರ್ಭದಲ್ಲಿ ಸಂತ್ರಸ್ಥರಿಗೆ ಗರಿಷ್ಠ ಪರಿಹಾರ ಒದಗಿಸುವಂತೆ ಸಂಬಂಧ ಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಉಡುಪಿ-ಚಿಕ್ಕಮಗಳೂರು ಜಿಲ್ಲೆಯ ಸಂಸದೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದ್ದಾರೆ.

     ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಂಸದರ ಸಭಾಂಗಣದಲ್ಲಿ ನಡೆದ ನೆರೆ ಹಾವಳಿ ಮತ್ತು ಪ್ರಾಕೃತಿಕ ವಿಕೋಪ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಳೆಯಿಂದ ಉಂಟಾಗಿರುವ ಹಾನಿಯನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲಾ ಅಧಿಕಾರಿಗಳೂ ದಿನದ ಇಪ್ಪತ್ತನಾಲ್ಕು ಘಂಟೆಯೂ ಸಾರ್ವಜನಿಕರ ಜೊತೆ ಸಂಪರ್ಕದಲ್ಲಿರಬೇಕು ಮತ್ತು ತುರ್ತು ಸಂಧರ್ಭದಲ್ಲಿ ಜನರ ನೆರವಿಗೆ ಧಾವಿಸಲು ಜಿಲ್ಲಾಧಿಕಾರಿ ಸಹಿತ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ, ಅಗ್ನಿಶಾಮಕ ದಳದವರು ಮತ್ತು ಸಂಬಂಧಪಟ್ಟ ಎಲ್ಲಾ ಇಲಾಖೆಗಳೂ ಸರ್ವ ಸನ್ನದ್ಧರಾಗಿರಬೇಕು ಎಂದರು.

     ಜಿಲ್ಲೆಯಲ್ಲಿ ಮಳೆ ಮತ್ತು ನೆರೆಯಿಂದ ಹಾನಿಗೊಳಗಾದವರಿಗೆ ಮಾನವೀಯ ನೆಲೆಯಲ್ಲಿ ಗರಿಷ್ಠ ಪರಿಹಾರವನ್ನು ಒದಗಿಸಿ ಔದಾರ್ಯ ಮೆರೆಯುವಂತೆ ಹೇಳಿದರು. ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ದಾಖಲೆಗಳು ಸರಿ ಇಲ್ಲವೆಂದು ಅವರಿಗೆ ಪರಿಹಾರ ನಿರಾಕರಣೆ ಮಾಡದೆ, ಮನೆಯ ವಾಸ್ತವ್ಯ ಧೃಢೀಕರಣ ಪತ್ರವಿದ್ದಲ್ಲಿ ಪರಿಹಾರದ ಹಣವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ನೆರೆ ಪರಿಹಾರದ ಪ್ರಗತಿ ಪರಿಶೀಲನೆಯ ದೈನಂದಿನ ಸ್ಥಿತಿಯ ವರದಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಿಗೆ ನೀಡುತ್ತಿರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲೆಯಲ್ಲಿ ನಡೆದಿರುವ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲೆಯಲ್ಲಿ 568 ಮನೆಗಳು ಹಾನಿಗೊಳಗಾಗಿದ್ದು, ಅದರಲ್ಲಿ 303 ಮನೆಗಳಿಗೆ ಈಗಾಗಲೇ 32.65 ಲಕ್ಷ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಉಳಿದ ಮನೆಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಲಾಗುವುದು ಎಂದರು. ಮಳೆಯಿಂದಾಗಿ ಭಾಗಶಃ ಹಾನಿಗೊಳಗಾದ ಮನೆಗಳಿಗೆ 6 ಸಾವಿರ ರೂ ಗಳು ಮತ್ತು ಸಂಪೂರ್ಣವಾಗಿ ಹಾನಿಗೊಳಗಾಗಿರುವ ಮನೆಗಳಿಗೆ 95,100 ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುತ್ತಿದೆ ಎಂದರು. ಪ್ರಾಕೃತಿಕ ವಿಕೋಪ ಪಿ.ಡಿ ಖಾತೆಯಲ್ಲಿ 28.35 ಕೋಟಿ ರೂ ಗಳ ಅನುದಾನವಿದ್ದು, ತಹಶೀಲ್ದಾರರ ಖಾತೆಗೆ 10 ಲಕ್ಷ ರೂ ಗಳನ್ನು  ಮುಂಗಡವಾಗಿ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

   4 ಲಕ್ಷ ರೂ ಗಳ ಪರಿಹಾರ:

     ಮಳೆಯಿಂದಾಗಿ ಜಿಲ್ಲೆಯಲ್ಲಿ ಮೂರು ಜನರು ಪ್ರಾಣ ಕಳೆದುಕೊಂಡಿದ್ದು, ಅದರಲ್ಲಿ ಒಬ್ಬ ಮೃತ ವ್ಯಕ್ತಿಯ ಕುಟುಂಬಕ್ಕೆ 4 ಲಕ್ಷ ರೂ ಗಳ ಪರಿಹಾರವನ್ನು ಈಗಾಗಲೇ ನೀಡಿದ್ದು, ಇನ್ನೊಬ್ಬರಿಗೆ ಇಂದು ವಿತರಿಸಲಾಗುವುದು, ಮತ್ತೊಬ್ಬರ ಮರಣ ಪ್ರಮಾಣ ಪತ್ರ ಸಿಕ್ಕಿದ ಕೂಡಲೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದರು.

     ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ, ಜೀವ ಹಾನಿಗೊಳಗಾದವರಿಗೆ ಈಗಿರುವ ಪರಿಹಾರ ಮೊತ್ತದ ಜೊತೆಗೆ 1 ಲಕ್ಷ ರೂ ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದು, ಅದರಂತೆಯೆ ಮೃತರಿಗೆ ಒಟ್ಟು 5 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಲಾಗುವುದು ಎಂದರು.

     ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೋಲಿಸ್ ಅಧೀಕ್ಷಕಿ ನಿಶಾ ಜೇಮ್ಸ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಜಿಲ್ಲೆಯ ಪೋಲೀಸ್ ಸಿಬ್ಬಂದಿಗಳಿಗೆ ರಕ್ಷಣಾ ಕಾರ್ಯದ ಬಗ್ಗೆ ತರಬೇತಿಯನ್ನು ನೀಡಿದೆ ಎಂದು ತಿಳಿಸಿದರು. ವಿವಿಧ ಅಧಿಕಾರಿಗಳು ಇಲಾಖಾವಾರು ನಷ್ಟಗಳ ಬಗ್ಗೆ ಮಾಹಿತಿ ನೀಡಿದರು.

     ಸಭೆಯಲ್ಲಿ ಜಿ.ಪಂ ಅಧ್ಯಕ್ಷ ದಿನಕರ ಬಾಬು, ದ.ಕ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು, ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಬಿ.ಎಮ್ ಸುಕುಮಾರ್ ಶೆಟ್ಟಿ, ಲಾಲಾಜಿ. ಆರ್. ಮೆಂಡನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.