ಉಡುಪಿ : ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮಹಾ ಚಂಡಮಾರುತವು ಲಕ್ಷದ್ವೀಪದಲ್ಲಿ ರೂಪುಗೊಂಡಿದ್ದು, ವಾಯುವ್ಯ ದಿಕ್ಕಿನೆಡೆಗೆ ಮುಂದುವರೆಯುತ್ತಾ ರಾಜ್ಯದ ಕರಾವಳಿ ಭಾಗದಲ್ಲಿ ನವೆಂಬರ್ 1 ರಂದು ಪ್ರತಿಕೂಲ ಪರಿಣಾಮದಿಂದಾಗಿ ಹೆಚ್ಚಿನ ಗಾಳಿಯೊಂದಿಗೆ ಮಳೆ ಬರುವ ಸಾಧ್ಯತೆ ಇರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗೃತ ಕ್ರಮ ವಹಿಸುವ ಸಲುವಾಗಿ ಸೂಚನೆಗಳನ್ನು ನೀಡಿರುತ್ತದೆ.
ಮೀನುಗಾರರು / ಪ್ರವಾಸಿಗರು ನದಿ ತೀರ / ಸಮುದ್ರಕ್ಕೆ ಇಳಿಯದಂತೆ ಎಚ್ಚರ ವಹಿಸಬೇಕು. ಜಿಲ್ಲಾ/ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು. ತಗ್ಗು ಪ್ರದೇಶ/ ಕೆರೆ/ ನದಿ ತೀರ/ ಸಮುದ್ರ ತೀರ ಪ್ರದೇಶಗಳಿಗೆ ಮಕ್ಕಳು ಹೋಗದಂತೆ ಪಾಲಕರು ಜಾಗೃತಿ ವಹಿಸಬೇಕು, ಮಕ್ಕಳು/ ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ/ ಮರಗಳ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳಿಗೆ ತಲುಪುವಂತೆ ಹಾಗೂ ತುರ್ತು ಸೇವೆಗೆ ಟೋಲ್ ಫ್ರೀ ನಂ: 1077, ದೂರವಾಣಿ ಸಂಖ್ಯೆ: 0820-2574802 / 2574360 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.