ನೀಟ್ ಪ್ರತಿಭಟನೆಯ ಬಿಸಿ:ಇಂದು ರಿಲೀಸ್ ಆಗಬೇಕಿದ್ದ ‘ರಾಮಾಯಣ’ಟ್ರೇಲರ್ ಬಿಡುಗಡೆ ಮುಂದಕ್ಕೆ

ನವದೆಹಲಿ: ನಟ ಯಶ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಜಂಟಿಯಾಗಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಚಿತ್ರತಂಡ ದಿಢೀರ್ ಮುಂದೂಡಿದೆ.

ಶುಕ್ರವಾರ ದೆಹಲಿಯ ಭಾರತ್ ಮಂಟಪದಲ್ಲಿ ಮಾಧ್ಯಮಗಳಿಗೆ ವಿಶೇಷ ಪ್ರೀಮಿಯರ್ ಪ್ರದರ್ಶನದ ಬಳಿಕ ಟ್ರೇಲರ್ ಅನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಜನೆ ಇತ್ತು. ಆದರೆ, ದೇಶದಾದ್ಯಂತ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಚಿತ್ರತಂಡ ಈ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ತೀವ್ರ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಈ ಬೆಳವಣಿಗೆಗೆ ಸ್ಪಂದಿಸಿರುವ ‘ರಾಮಾಯಣ’ ಚಿತ್ರತಂಡ, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಪ್ರಕಟಿಸಿದ್ದು, “ನಮ್ಮ ದೇಶದ ಯುವಜನರೇ ನಮ್ಮ ಭವಿಷ್ಯ. ಆ ಭವಿಷ್ಯವನ್ನು ರಕ್ಷಿಸಲು ನಾವೆಲ್ಲರೂ ನಮ್ಮಿಂದಾದ ಅತ್ಯುತ್ತಮ ಪ್ರಯತ್ನ ಮಾಡೋಣ” ಎಂದು ತಿಳಿಸಿದೆ. ವಿದ್ಯಾರ್ಥಿಗಳ ಹಕ್ಕುಗಳು ಮತ್ತು ಅವರ ಭವಿಷ್ಯದ ಬೆಂಬಲಕ್ಕೆ ನಿಲ್ಲುವ ಉದ್ದೇಶದಿಂದ ಟ್ರೇಲರ್ ಬಿಡುಗಡೆಯನ್ನು ಮುಂದೂಡಿರುವುದಾಗಿ ಸ್ಪಷ್ಟಪಡಿಸಿದೆ.

ಭಾರತೀಯ ಚಿತ್ರರಂಗದ 100 ವರ್ಷಗಳ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸುವ ಚಿತ್ರವಾಗಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ. ನಿರ್ಮಾಪಕರಾದ ಯಶ್ ಮತ್ತು ನಮಿತ್ ಮಲ್ಹೋತ್ರಾ ಅವರು ಭಾರತದ ಸಂಸ್ಕೃತಿ ಹಾಗೂ ರಾಮಾಯಣ ಮಹಾಕಾವ್ಯವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುವ ಉದ್ದೇಶದಿಂದ ಅಮೆರಿಕದ ಪ್ರತಿಷ್ಠಿತ CinemaCon ವೇದಿಕೆಯಲ್ಲೂ ಚಿತ್ರದ ಭರ್ಜರಿ ಪ್ರಚಾರ ನಡೆಸಿದ್ದರು.

ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ. ಟ್ರೇಲರ್ ಬಿಡುಗಡೆಯ ಹೊಸ ದಿನಾಂಕವನ್ನು ಇನ್ನೂ ಪ್ರಕಟಿಸದಿದ್ದರೂ, ವಿಶ್ವದಾದ್ಯಂತ ಸಿನಿಪ್ರೇಮಿಗಳು ಅದರಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.