ಸುಪ್ರೀಂ ಕೋರ್ಟ್‌ನಲ್ಲಿ ಇಂದು ಶೃಂಗೇರಿ ಅಂಚೆ ಮತ ಮರು ಎಣಿಕೆ ಪ್ರಕರಣ ವಿಚಾರಣೆ, ರಾಜ್ಯದ ಗಮನ ತೀರ್ಪಿನತ್ತ

ಚಿಕ್ಕಮಗಳೂರು: 2023ರ ವಿಧಾನಸಭೆ ಚುನಾವಣೆಯಿಂದ ಆರಂಭವಾಗಿ 2026ರಲ್ಲಿ ಶಾಸಕ ಸ್ಥಾನ ಬದಲಾವಣೆಗೆ ಕಾರಣವಾಗಿ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅಂಚೆ ಮತಗಳ ಮರು ಎಣಿಕೆಗೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುಮಾರು ಮೂರು ವರ್ಷಗಳ ವಿಚಾರಣೆಯ ಬಳಿಕ ಕರ್ನಾಟಕ ಹೈಕೋರ್ಟ್ ಅಂಚೆ ಮತಗಳನ್ನು ಮರು ಎಣಿಸಿ ಹೊಸ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿತ್ತು.

ಹೈಕೋರ್ಟ್ ಆದೇಶದಂತೆ ಮೇ 2ರಂದು ನಡೆದ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ಈವರೆಗೆ ಶಾಸಕರಾಗಿದ್ದ ಟಿ.ಡಿ. ರಾಜೇಗೌಡ 255 ಮತಗಳಿಂದ ಸೋತಿದ್ದರು. ಬಳಿಕ ಡಿ.ಎನ್. ಜೀವರಾಜ್ ಶಾಸಕರಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದರು.

ಆದರೆ, ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಟಿ.ಡಿ. ರಾಜೇಗೌಡ ಅವರನ್ನು ಶಾಸಕ ಸ್ಥಾನದಲ್ಲೇ ಮುಂದುವರಿಯಲು ಅವಕಾಶ ನೀಡಿತ್ತು.

ಇಂದು ನಡೆಯಲಿರುವ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶದ ಮಾನ್ಯತೆ, ಚುನಾವಣಾ ಆಯೋಗ ಪ್ರಕಟಿಸಿರುವ ಫಲಿತಾಂಶ ಹಾಗೂ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸಲಿದೆ.

ಅಂಚೆ ಮತಗಳ ಮರು ಎಣಿಕೆಗೆ ಮುನ್ನ ಬ್ಯಾಲೆಟ್ ಪೇಪರ್‌ಗಳಿದ್ದ ಪೆಟ್ಟಿಗೆಗಳನ್ನು ತೆರೆಯಲಾಗಿತ್ತು ಮತ್ತು ಮತಗಳಲ್ಲಿ ತಿರುಚಾಟ (ಟ್ಯಾಂಪರಿಂಗ್) ನಡೆದಿದೆ ಎಂದು ಟಿ.ಡಿ. ರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆಯಂತೆ ಚುನಾವಣಾ ಆಯೋಗವು 2023 ಹಾಗೂ 2026ರ ಮತ ಎಣಿಕೆಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಈ ಪ್ರಕರಣದ ಅಂತಿಮ ತೀರ್ಪಿನತ್ತ ಶೃಂಗೇರಿ ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲ, ರಾಜ್ಯದ ರಾಜಕೀಯ ವಲಯವೂ ತೀವ್ರ ಕುತೂಹಲದಿಂದ ಕಾದು ನೋಡುತ್ತಿದೆ. ಇಂದು ನಡೆಯುವ ವಿಚಾರಣೆ ಪ್ರಕರಣದ ಮುಂದಿನ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಇದೆ.