ಹಲಸಿನಹಣ್ಣಿನ ಪಾಯಸದಲ್ಲೂ ಇದೆ ಔಷಧೀಯ ಗುಣ!

ಪ್ರಕೃತಿಯಲ್ಲಿ ದೊರಕುವ ಎಲ್ಲಾ ಹಣ್ಣುಗಳ ಪೈಕಿ ಹಲಸಿನಹಣ್ಣು ಒಂದು ಉತ್ತಮ ಹಣ್ಣಾಗಿದೆ. ಇದರಲ್ಲಿ ಅನೇಕ ರೀತಿಯ ವಿಶೇಷ ಆರೋಗ್ಯಕರ ಗುಣಗಳಿದೆ. ಹಲಸಿನಹಣ್ಣಿನಲ್ಲಿ ಯಾವುದೇ ರೀತಿಯ ಪೋಷಕಾಂಶ ಇಲ್ಲ, ಹಾಗೂ ಇದನ್ನು ತಿಂದರೆ ಆರೋಗ್ಯ ಹದಗೆಡುತ್ತದೆ ಎನ್ನುವ ತಪ್ಪು ಪರಿಕಲ್ಪನೆ ಜನರಲ್ಲಿ ಇರುವುದರಿಂದ ಹಲಸಿನಹಣ್ಣನ್ನು ದೂರ ಇಡಲು ಕಾರಣವಾಗಿದೆ. ಆದರೆ ಹಲಸಿನಹಣ್ಣಿನಲ್ಲಿ ಅಪಾರ ರೀತಿಯ ಆರೋಗ್ಯಕ್ಕೆ ಬೇಕಾಗಿರುವ ಔಷಧೀಯ ಗುಣಗಳಿದೆ ಎನ್ನುತ್ತಾರೆ ಸಿಲ್ವಿಯಾ ಕೊಡ್ದೆರೋ ಅವರ  ಅಂಕಣ ಓದಿ

ಲಸಿನಹಣ್ಣಿನಲ್ಲಿ ಅಧಿಕಾಂಶ ಪೊಟ್ಯಾಷಿಯಂ ಇರುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದರಲ್ಲಿ ವಿಟಮಿನ್-ಸಿ ಅಧಿಕವಾಗಿದೆ. ಕ್ಯಾನ್ಸರ್, ಅಲ್ಸರ್ ನಂತಹ ಖಾಯಿಲೆಗಳು ಬಾರದಂತೆ ತಡೆಗಟ್ಟುವ ಗುಣ ಹಲಸಿನಹಣ್ಣಿನಲ್ಲಿದೆ ಎಂದು ಕೃಷಿ ತಜ್ಞರು ಹೇಳುತ್ತಾರೆ. ಹಲಸಿನ ತೊಳೆ, ಎಲೆ, ಮೇಣ, ಬೀಜ,ಬೇರಿನವರೆಗೂ ಕೆಲವು ಖಾಯಿಲೆಗಳಿಗೆ ಔಷಧವಾಗಿ ಬಳಸುತ್ತಾರೆ. ಇದರಲ್ಲಿ ಪ್ರೋಟೀನ್, ಪಿಷ್ಟ, ಕ್ಯಾಲ್ಸಿಯಂ, ಮೆಗ್ನೇಷಿಯಂ, ರಂಜಕ, ವಿಟಮಿನ್-ಎ ಮತ್ತು ನಾರಿನಾಂಶ ಇದೆ.

ಈಗ ಹಲಸಿನಹಣ್ಣಿನ ಸೀಸನ್ ಆಗಿರುವುದರಿಂದ ನಾವು ಯಥೇಚ್ಛವಾಗಿ ಇದರ ಲಾಭವನ್ನು ಪಡೆಯೋಣ. ಹಲಸಿನಹಣ್ಣಿನಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಹಲಸಿನ ದೋಸೆ, ಇಡ್ಲಿ, ಕಡುಬು, ಮುಳಕ, ಕೇಕ್ ಈ ರೀತಿ 10-15 ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ.

ನಾವಿಂದು ಆರೋಗ್ಯಕರ ಹಾಗೂ ಕಡಿಮೆ ಸಮಯದಲ್ಲಿ ಹಲಸಿನಹಣ್ಣಿನ ಪಾಯಸವನ್ನು ಹೇಗೆ ತಯಾರಿಸಬಹುದೆಂದು ನೋಡೋಣ.

ಬಿಸಿ-ಬಿಸಿ ಹಲಸಿನ ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು:-

▪️ಹಲಸಿನ ತೊಳೆ-10
▪️ಹೆಸ್ರುಬೇಳೆ-1/4 ಕಪ್
▪️ತೆಂಗಿನ ದಪ್ಪ ಹಾಲು-1ಕಪ್
▪️ತೆಂಗಿನ ತೆಳು ಹಾಲು-1/2 ಕಪ್
▪️ಬೆಲ್ಲ-1/2 ಕಪ್
▪️ತುಪ್ಪ-2 ಟೇಬಲ್ ಸ್ಪೂನ್
▪️ಗೋಡಂಬಿ-1 ಟೇಬಲ್ ಸ್ಪೂನ್
▪️ದ್ರಾಕ್ಷಿ-1 ಟೇಬಲ್ ಸ್ಪೂನ್
▪️ಏಲಕ್ಕಿ-ಸ್ವಲ್ಪ
▪️ಉಪ್ಪು-ಚಿಟಿಕೆ

ಮಾಡುವ ವಿಧಾನ
ಒಂದು ಕುಕ್ಕರ್ ನಲ್ಲಿ ಹೆಸ್ರುಬೇಳೆಗೆ ಸ್ವಲ್ಪ ನೀರು ಬೆರೆಸಿ 2 ವಿಷಲ್ ಕೂಗಿಸಿ. ಮಿಕ್ಸಿ-ಜಾರ್ ನಲ್ಲಿ ಹಲಸಿನ ತೊಳೆಗಳನ್ನು ಹಾಕಿ ಪೇಸ್ಟ್ ತಯಾರಿಸಿ. ಒಂದು ಪಾತ್ರೆಗೆ ಬೆಂದ ಹೆಸ್ರುಬೇಳೆ, ಬೆಲ್ಲ, ಹಲಸಿನಹಣ್ಣಿನ ಪೇಸ್ಟ್, ತೆಳು ತೆಂಗಿನ ಹಾಲು ಬೆರೆಸಿ ಮಧ್ಯಮ ಉರಿಯಲ್ಲಿ ಕೈಬಿಡದೆ ಕದಡುತ್ತಾ ಇರಿ. ಕುದಿ ಬಂದಾಗ ದಪ್ಪ ತೆಂಗಿನ ಹಾಲು ಬೆರೆಸಿ ಅಗತ್ಯ ಬಿದ್ದಲ್ಲಿ ಸ್ವಲ್ಪ ನೀರನ್ನು ಬೆರೆಸಿ ಕುದಿಸಿ ಕೊನೆಗೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ, ಚಿಟಿಕೆ ಉಪ್ಪನ್ನು ಬೆರೆಸಿದರೆ ಘಮ-ಘಮಿಸುವ ಹಾಗೂ ಬಿಸಿ-ಬಿಸಿಯಾದ ರುಚಿಕರ ಹಲಸಿನ ಹಣ್ಣಿನ ಪಾಯಸ ರೆಡಿ.

ಸಿಲ್ವಿಯಾ ಕೊಡ್ದೆರೋ ಕಾರ್ಕಳದ ಎಂಪಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕ್ರಿಯಾಶೀಲ ಆರೋಗ್ಯಕ್ಕೆ ಏನೇನು ಕಾಳಜಿ ಮಾಡಬೇಕು ಸುಂದರ ಜೀವನಶೈಲಿ ನಡೆಸೋದು ಹೇಗೆ ಮೊದಲಾದವುಗಳ ಕುರಿತು ತಮ್ಮದೇ ಚಿಂತನೆಯುಳ್ಳ ಇವರು ಕಿರುಚಿತ್ರಗಳಲ್ಲೂ ನಟಿಸಿದ್ದಾರೆ.ಹೊಸ ಹೊಸ ಪಾಕಪ್ರಯೋಗ,ಬರವಣಿಗೆ,ಓದು ಇವರ ಹವ್ಯಾಸ