ನೆಲ್ಲಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಅವರಿಗೆ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಹೆಬ್ರಿ: ನಿವೃತ್ತ ಶಿಕ್ಷಕ ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದ, ಹರಿದಾಸ, ಜಿನದಾಸ, ತಾಳಮದ್ದಳೆ ಅರ್ಥದಾರಿ, ನಾಟಕಕಾರ, ಪ್ರಸಂಗಕರ್ತ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಚಾಣಕ್ಯ ಎಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಹೆಬ್ರಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ನೆಲ್ಲಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಆಯ್ಕೆಯಾಗಿದ್ದಾರೆ.

ಬಹುಮುಖ ಪ್ರತಿಭೆಯ ಸಮಾಜಮುಖಿ ಶಿಕ್ಷಕ:
ಶಿಕ್ಷಣ ಸಂಸ್ಥೆಯಲ್ಲಿ ಉತ್ತಮವಾದ ಶಿಕ್ಷಕರಿದ್ದರೆ ಸುಸಂಸ್ಕೃತ ಪ್ರಜೆಗಳನ್ನು ಹೊಂದಿದ ರಾಷ್ಟದ ನಿರ್ಮಾಣವಾಗುತ್ತದೆ. ಈ ಹೊಣೆಯನ್ನು ಹೊತ್ತು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಶಿಕ್ಷಕರು, ಬದುಕಿನ ಹೆಜ್ಜೆಯನ್ನು ಸರಿಯಾದ ಪಥಕ್ಕೆ ಕೊಡೊಯ್ಯುವವರೇ ನಿಜವಾದ ಉತ್ತಮ ಶಿಕ್ಷಕರು. ಒಬ್ಬ ವಿದ್ಯಾರ್ಥಿಯ ಜೀವನಯಾನದ ಬದುಕಿಗೆ ಆದರ್ಶವಾಗಿ, ದಡ ಸೇರಲು ನಾವಿಕನಾಗಿ, ಸನ್ಮಾರ್ಗದ ಚಾಲಕನಾಗಿ, ಅಜ್ಞಾನದ ಕತ್ತಲೆಯಲ್ಲಿ ಬೆಳದಿಂಗಳಾಗಿ, ಜ್ಞಾನದಾಹಿಗಳಿಗೆ ಅಕ್ಷರದಾಸೋಹಿಯಾಗಿ, ಸಾಧನೆಯ ಕಿರೀಟಕ್ಕೆ ಸೂರ್ತಿಯ ನೆಲೆಯಾಗಿ, ಭರವಸೆಯ ಬಾಳಿಗೆ ಮಾಲಕನಾಗಿ, ಆದರ್ಶಕ್ಕೆ ನಾಯಕನಾಗಿ, ನಡೆಯುವವನೇ ಉತ್ತಮ ಶಿಕ್ಷಕ. ಅಂತಹ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ವೃತ್ತಿ ಶಿಕ್ಷಕರಾಗಿರದೆ ಶಿಕ್ಷಕ ವೃತ್ತಿಯಲ್ಲಿ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ತನಗೆ ಸಿಗುವ ತಿಂಗಳ ವೇತನದಲ್ಲಿ ಸ್ವಲ್ಪ ಭಾಗವನ್ನು ಸರಕಾರಿ ಶಾಲೆಯ ಅಗತ್ಯತೆಗೆ ಬಳಸಿಕೊಳ್ಳುವ ಜೊತೆಗೆ ದಾನಿಗಳನ್ನು ಹಿಡಿದು ಶಾಲೆಯ ಅಭಿವೃದ್ಧಿಯಲ್ಲಿ ವಿಶೇಷ ಮುತುವರ್ಜಿ ವಹಿಸಿದ ಅಪರೂಪದ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಗುರುತಿಸಿಕೊಂಡು ರವೀಂದ್ರ ಹೆಗ್ಡೆ ಅವರು ಮಾದರಿಯಾಗಿದ್ದಾರೆ.

ಕಾರ್ಕಳ ತಾಲೂಕು ನಿಂಜೂರು ಮಾಧವ ಹೆಗ್ಡೆ ಮತ್ತು ಶ್ರೀಮತಿ ವಾರಿಜ ಹೆಗ್ಡೆ ದಂಪತಿಯ ಪುತ್ರನಾಗಿ ಜನಿಸಿರುವ ರವೀಂದ್ರ ಹೆಗ್ಡೆ ಅವರು ಬಿ ಕಾಂ/ ಟಿಸಿಎಚ್ ಪದವೀಧರರು. 1992ರಲ್ಲಿ ಶಿಕ್ಷೆಕ ವೃತ್ತಿಗೆ ಪಾದರ್ಪಣೆ ಮಾಡಿದ ಇವರು ಪ್ರಸ್ತುತ ನೆಲ್ಲಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಲ್ಲಿ ಅಡಗಿರುವ ಸುಕ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡುವುದರ ಜೊತೆಗೆ ಪ್ರೋತ್ಸಾಹ ನೀಡಿ ತರಬೇತಿಯನ್ನು ನೀಡುತ್ತಾ ಮಕ್ಕಳ ಏಳಿಗೆಯಲ್ಲಿ ಸದಾ ತೊಡಗಿಸಿಕೊಂಡಿರುವ ಇವರು ಕಳೆದ 13 ವರ್ಷಗಳಿಂದ ನೆಲ್ಲಿಕಟ್ಟೆ ಶಾಲೆಯ ಅಭಿವೃದ್ಧಿಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಪರಿಸ್ಥಿತಿಯಲ್ಲಿದ್ದ ನೆಲ್ಲಿಕಟ್ಟೆ ಶಾಲೆಯನ್ನು ದಾನಿಗಳು ಮತ್ತು ಶಾಲಾ ಎಸ್‌ಡಿಎಂಸಿ ಅವರ ಸಹಕಾರದೊಂದಿಗೆ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಇವರ ಪ್ರಯತ್ನ ಶ್ಲಾಘನೀಯ.

ಆಧುನಿಕರಣದಿಂದಾಗಿ ಮಕ್ಕಳು ಆಂಗ್ಲ ಭಾಷಾ ವ್ಯಾಮೋಹಕ್ಕೆ ಒಳಗಾಗಿ ಬೇರೆ ಕಡೆ ಹೋಗುತ್ತಿರುವುದನ್ನ ತಪ್ಪಿಸಲು 10 ವರ್ಷಗಳ ಹಿಂದೆಯೇ ಇಲ್ಲಿ ಎಲ್‌ಕೆಜಿ ಮತ್ತುಯು ಕೆ ಜಿ ಯನ್ನು ಆರಂಭಿಸಿದ ಹೆಗ್ಗಳಿಕೆ ಇವರದ್ದು. ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳ ಹೆಸರಿನಲ್ಲಿ ದಾನಿಗಳ ನೆರವಿನಿಂದ ರೂ.5000 ಠೇವಣಿ ಇರಿಸಿ 5ನೇ ತರಗತಿ ವಿದ್ಯಾಭ್ಯಾಸ ಮುಗಿದ ಬಳಿಕ ಹಣವನ್ನು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಯೋಜನೆ ಇವರದ್ದು ವಿನೋತನವಾಗಿದೆ. ಗ್ರಾಮೀಣ ಪ್ರದೇಶದ ಹಳ್ಳಿ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಶಾಲೆಗೆ ಬರಲು ವಾಹನದ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಸಮವಸ್ತ್ರ ಮೊದಲಾದ ಸೌಲಭ್ಯವನ್ನು ಪ್ರತಿ ವರ್ಷ ನೀಡುತ್ತಾ ಬಂದಿದ್ದಾರೆ.

ಪೆರ್ಡೂರು ಬಂಟರ ಸಂಘದ ಅಧ್ಯಕ್ಷರಾಗಿದ್ದು ಕೊಂಡು ಹಲವಾರು ಸಮಾಜಮುಖಿ ಕಾರ್ಯದ ಜೊತೆಗೆ
ಉತ್ತಮ ಸಂಘಟಕರಾಗಿ ಕಾರ್ಯಕಮ ನಿರೂಪಕರಾಗಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಜನಮನ್ನಣೆ ಗಳಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಶಿಕ್ಷಕರ ಸಂಘಗಳಲ್ಲಿ ಅಧ್ಯಕ್ಷರಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ
ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಇವರ ಪ್ರಯತ್ನ ವಿಶೇಷವಾದುದು.

ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ಸಂಪೂರ್ಣವಾಗಿ ತೊಡಿಸಿಕೊಂಡ ಇವರು ಹಲವಾರು ನಾಟಕಗಳಲ್ಲಿ ಅಭಿನಯ, ಏಕ ಪಾತ್ರ ಅಭಿನಯ, ಹಾಸ್ಯ ಕಥೆಗಳನ್ನು ಹೇಳಿವುದರ ಮೂಲಕ ಮಕ್ಕಳನ್ನು ರಂಜಿಸುವುದು ಇವರ ಹವ್ಯಾಸವಾಗಿದೆ. ಈಗಾಗಲೇ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿದ್ದು ಶಿಕ್ಷಣದ ಜೊತೆ ಎಲ್ಲಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರ ಶೈಕ್ಷಣಿಕ ಸಾಹಿತ್ಯ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ರಂಗದಲ್ಲಿನ ಅಮೂಲ್ಯ ಸೇವೆಯನ್ನು ಗುರುತಿಸಿ ಈ ಬಾರಿ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಅಂಬಾತನಯರ ನೆನಪಿನಲ್ಲಿ ಪ್ರಶಸ್ತಿ :
ಚಾಣಕ್ಯ ಸಂಸ್ಥೆ ಕಳೆದ 10 ವರ್ಷಗಳಿಂದ ಶಿಕ್ಷಣ ಮಾತ್ರವಲ್ಲದೆ ವಿವಿಧ ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿವಿಧ ವೇದಿಕೆಗಳಲ್ಲಿ ಆವಕಾಶ ಕಲ್ಪಿಸುವುದರ ಜತೆಗೆ ಪತ್ರಿಕೆ ಹಾಗೂ ಟಿ.ವಿ.ಮಾಧ್ಯಮಗಳಲ್ಲಿ ಪ್ರತಿಭೆಯ ಅನಾವರಣ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಚಾಣಕ್ಯ ಸಂಸ್ಥೆ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣದ ಜತೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಕೊಂಡು ಮಕ್ಕಳ ಪ್ರತಿಭೆಯನ್ನು ಹೊರತರುವಲ್ಲಿ ಶ್ರಮಿಸುತ್ತಿರುವ ಉಡುಪಿ ಜಿಲ್ಲೆಯ ಶಿಕ್ಷಕರನ್ನು ಕಳೆದ 3 ವರ್ಷದಿಂದ ಗುರುತಿಸಿ ಶಿಕ್ಷಣದ ಜತೆ ಸಾಂಸ್ಕೃತಿಕ, ಸಾಹಿತ್ಯ, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ಹೆಸರಾಂತ ಶಿಕ್ಷಕ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ನೆನಪಿನಲ್ಲಿ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪ್ರಶಸ್ತಿ ಪ್ರಧಾನ ಸಮಾರಂಭ : ಹೆಬ್ರಿ ಶ್ರೀಮತಿ ಶೀಲಾ ಸುಭೋದ್ ಬಂಟರ ಭವನದಲ್ಲಿ ಸೆ.5ರಂದು ಮಧ್ಯಾಹ್ನ 2. 30ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದ್ದು ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಸನತ್ ಕುಮಾರ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ವೀಣಾ ಯು.ಶೆಟ್ಟಿ ವಹಿಸಲಿದ್ದು, ಹೆಬ್ರಿ ತಾಲೂಕು ತಹಶೀಲ್ದಾರ್ ಪ್ರಸಾದ್ ಎಸ್ ಎ, ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಬಿ ಹರ್ಷ ಶೆಟ್ಟಿ, ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ ವಿಠ್ಠಲ್ ಶೆಟ್ಟಿ, ಉದ್ಯಮಿ ವಾದಿರಾಜ ಶೆಟ್ಟಿ, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ನೇತಾಜಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಸಂತೋಷ್ ಪೂಜಾರಿ ಬಲ್ಲಾಡಿ, ಹೆಬ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಆಶಾ ಬಿ.ಶೆಟ್ಟಿ, ಹೆಬ್ರಿ ಜೇಸಿಐ ಅಧ್ಯಕ್ಷೆ ಸೋನಿ ಪಿ. ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.