ಉಡುಪಿ: ಬೆಂಗಳೂರಿನ ಬಿಡದಿ ಸಮೀಪ ಗುರುವಾರ ರಾತ್ರಿ ಎರಡು ಬೈಕ್ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕೋಟ ಪಡುಕೆರೆಯ ನಿವಾಸಿ, ಹೋಟೆಲ್ ಉದ್ಯಮಿ ವಿಶ್ವನಾಥ ಎಚ್. (55) ಮೃತಪಟ್ಟಿದ್ದಾರೆ.
ಮಣೂರು-ಪಡುಕೆರೆಯ ಜಟ್ಟಿಗೇಶ್ವರ ದೈವಸ್ಥಾನದ ಸಮೀಪದ ನಿವಾಸಿ ನರಸಿಂಹ ಮೊಗವೀರ ಅವರ ಪುತ್ರ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸುಮಾರು 33 ವರ್ಷಗಳ ಹಿಂದೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದ ವಿಶ್ವನಾಥ ಅವರು, ಬಳಿಕ ಬೆಂಗಳೂರಿಗೆ ತೆರಳಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
ಇತ್ತೀಚಿನ ವರ್ಷಗಳಲ್ಲಿ ಬಿಡದಿಯಲ್ಲಿ ‘ಕರಾವಳಿ ಕಿಚನ್’ ಹೆಸರಿನ ಹೋಟೆಲ್ ನಡೆಸುತ್ತಿದ್ದರು.ಗುರುವಾರ ರಾತ್ರಿ ಹೋಟೆಲ್ನ ದೈನಂದಿನ ವ್ಯವಹಾರ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅವರು ಸಂಚರಿಸುತ್ತಿದ್ದ ಬೈಕ್ಗೆ ಮತ್ತೊಂದು ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ವಿಶ್ವನಾಥ ಅವರು ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ಬೆಂಗಳೂರಿನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಳಿಕ ಹುಟ್ಟೂರಿಗೆ ತರಲು ಕುಟುಂಬಸ್ಥರು ವ್ಯವಸ್ಥೆ ಮಾಡುತ್ತಿದ್ದಾರೆ. ಶನಿವಾರ ಬೆಳಿಗ್ಗೆ ಮಣೂರು-ಪಡುಕೆರೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.















