ಉಡುಪಿ: ಈಚೆಗೆ ಉಡುಪಿ ಹೊರವಲಯದ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಿಯಕರನೊಬ್ಬ ತನ್ನ ಪ್ರಿಯತಮೆಗೆ ಚೂರಿಯಿಂದ ಇರಿದು ಕೊಲೆಗೈದು ಬಳಿಕ ತಾನೂ ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡು ಘಟನೆಗೆ ಸಂಬಂಧಿಸಿದಂತೆ ಪ್ರಿಯತಮೆ ಸೌಮ್ಯಶ್ರೀಯ ಮನೆಯವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ಸಂದೇಶ್ ಕುಲಾಲ್ (ಪ್ರಿಯಕರ) ಮತ್ತು ನನ್ನ ಮಗಳು ಪ್ರೀತಿಸುತ್ತಿದ್ದ ವಿಚಾರ ನಮಗೆ ಮೂರು ನಾಲ್ಕು ವರ್ಷಗಳ ಹಿಂದೆ ಗೊತ್ತಾಯಿತು. ಹಾಗಾಗಿ ನನ್ನ ಮಗಳನ್ನು ಮದುವೆ ಆಗುವಂತೆ ಐದಾರು ಬಾರಿ ಅವರ ಮನೆಗೆ ಹೋಗಿ ಕೇಳಿಕೊಂಡಿದ್ದೆವು. ಆದರೆ ಆತ ಎರಡು ವರ್ಷ ಗಳ ಕಾಲ ಮದುವೆ ಆಗುವುದಿಲ್ಲ ಹೇಳಿ ಮುಂದೂಡಿದನು. ಆತನ ಮನೆಯವರು ಕೂಡ ಸರಿಯಾಗಿ ಸ್ಪಂದಿಸಿಲ್ಲ. ಆತನಿಂದ ನನ್ನ ಮಗಳು ಮೂರು ವರ್ಷಗಳ ಕಾಲ ಕಿರುಕುಳ ಅನುಭವಿಸಿದಳು. ಇದನ್ನು ತಾಳಲಾರದೆ ಆಕೆ ಕೊನೆಗೆ ಬೇರೆ ಮದುವೆಗೆ ಒಪ್ಪಿಗೆ ಸೂಚಿಸಿದಳು ಎಂದು ಸೌಮ್ಯಶ್ರೀಯ ತಾಯಿ ಪ್ರಮೀಳಾ ಭಂಡಾರಿ ಹೇಳಿದರು.
ಮದುವೆಗೆ ಒಪ್ಪಿಗೆ ಸೂಚಿಸಿದಲ್ಲದೆ, ಮದುವೆ ಆಗುವಂತೆ ಸಂದೇಶ್ ಹಾಗೂ ಆತನ ಮನೆಯಲ್ಲಿ ಕೇಳಿಕೊಂಡಿದ್ದೇವು. ಆದರೆ ಸಂದೇಶ್ ಮದುವೆಗೆ ವಿಳಂಬ ಮಾಡಿದ್ದಲ್ಲದೆ, ಮಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದನು. ಆಕೆಯ ತಂದೆಗೆ ಹೃದಯಾಘಾತವಾಗಿತ್ತು. ಇನ್ನೊಮ್ಮೆ ಹೃದಯಾಘಾತವಾದರೆ ಅವರ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ತಿಳಿಸಿದರು. ಹೀಗಾಗಿ ನಾವು ಮತ್ತೆ ಸಂದೇಶ್ ಮನೆಯವರನ್ನು ಸಂಪರ್ಕಿಸಿ ಮದುವೆಗೆ ಒತ್ತಾಯಿಸಿದೆವು. ಅದಕ್ಕೆ ಅವರು ಎರಡು ವರ್ಷ ಬಿಟ್ಟು ಮದುವೆಯಾಗುವುದಾಗಿ ಹೇಳಿದರು. ರಿಜಿಸ್ಟಾರ್ ಮದುವೆ ಆಗುವಂತೆ ಕೇಳಿಕೊಂಡೆವು. ಅದಕ್ಕೂ ಆತ ಒಪ್ಪಲಿಲ್ಲ. ಇದರಿಂದ ನನ್ನ ಮಗಳು ಸಾಕಷ್ಟು ನೊಂದುಕೊಂಡಳು ಎಂದು ಕಣ್ಣೀರು ಹಾಕಿದರು.
ಸಂದೇಶ್ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದನು. ಅದಕ್ಕೆ ಒಂದು ತಿಂಗಳ ಹಿಂದೆ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಅದರಂತೆ ಪೊಲೀಸರು ಆತನನ್ನು ಕರೆದು ಬುದ್ದಿ ಹೇಳಿ ಕಳುಹಿಸಿದ್ದರು. ಮದುವೆಗೆ ಒತ್ತಡ ಹಾಕಿದ್ದಕ್ಕೆ ನನ್ನ ಹತ್ತಿರ ಹಣ ಇಲ್ಲ, ಬೇಕಾದರೆ ನೀನು ಐದು ಲಕ್ಷ ರೂ. ಕೊಡು ಎಂದು ಆತ ಹೇಳಿದ್ದನು. ಆದರೂ ನನ್ನ ಮಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದರು.
ಸೆ.20ಕ್ಕೆ ಮದುವೆ ನಿಗದಿಯಾಗಿತ್ತು:
ಸೌಮ್ಯಶ್ರೀಗೆ ನಿಶ್ಛಿತಾರ್ಥ ಆಗಿ ಸೆ.20ಕ್ಕೆ ಮದುವೆ ನಿಗದಿಯಾಗಿತ್ತು. ಅದಕ್ಕಾಗಿ ಆಕೆ ಕೊಲೆಯಾಗುವ ದಿನ ಕೆಲಸಕ್ಕೆ ರಾಜೀನಾಮೆ ನೀಡಿದ್ದಳು. ಆ ಹಿನ್ನೆಲೆಯಲ್ಲಿ ಮೂರು ವರ್ಷಗಳ ಕಾಲ ದುಡಿದ ಆಕೆಗೆ ಬ್ಯಾಂಕಿನಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಕೂಡ ಏರ್ಪಡಿಸಲಾಗಿತ್ತು’ ಎಂದು ಸೌಮ್ಯಶ್ರೀ ಅಣ್ಣ ಸುನೀಲ್ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಸೌಮ್ಯಶ್ರೀ ಅಣ್ಣ ಸುನೀಲ್, ಅವರ ಪತ್ನಿ ನಿಕ್ಷೀತಾ, ಸಂಬಂಧಿ ಜಗದೀಶ್, ಅಶೋಕ್ ಕುಮಾರ್ ಅಲೆವೂರು, ಸೋಮಶೇಖರ್ ಭಂಡಾರಿ ಉಪಸ್ಥಿತರಿದ್ದರು.