ಉಡುಪಿ: ಗ್ಯಾರಂಟಿಗಳಿಂದ ಹಳ್ಳಿ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಹಿಳೆಯರ ಘನತೆಗೆ ಧಕ್ಕೆ ತಂದಿದ್ದಾರೆ. ಇವರ ಇಂತಹ ಹೇಳಿಕೆಯಿಂದ ಮಹಿಳೆಯರ ಬಗ್ಗೆ ಇವರಿಗಿರುವ ನೀಚ ಭಾವನೆ ಹೊರಬಂದಿದೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.
ಹೆಣ್ಣುಮಗಳ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಿರುವುದು ಖಂಡನೀಯ. ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆ ಮಾಡಿಲ್ಲ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗಿದೆ ಹೊರತು ದಾರಿ ತಪ್ಪಿದ್ದಾರೆ ಎನ್ನುವುದು ಸರಿಯಲ್ಲ. ಬಿಜೆಪಿ ಮತ್ತು ಜೆಡಿಸ್ ಚುನಾವಣೆಗಾಗಿ ಈಗ ಒಂದಾಗಿದ್ದು ಕುಮಾರಸ್ವಾಮಿಯವರ ಮನಸ್ಥಿತಿ ಬಗ್ಗೆ ರಾಜ್ಯದ ಜನರಿಗೆ ಗೊತ್ತಾಗಿದೆ. ಸುಳ್ಳು ಹೇಳುವುದು ಬಿಜೆಪಿಯ ಅಜೆಂಡಾ ಆಗಿದೆ.
ಇಡೀ ದೇಶ ಇಂದು ನಮ್ಮ ಗ್ಯಾರೆಂಟಿ ಯೋಜನೆಯನ್ನು ಹೊಗಳುತ್ತಿದೆ.
ನಮ್ಮ ಗ್ಯಾರೆಂಟಿ ನೋಡಿ, ಮೋದಿ ಗ್ಯಾರೆಂಟಿ ತಂದಿದ್ದಾರೆ. ಮಹಿಳೆಯರ ಬಗ್ಗೆ ಕುಮಾರಸ್ವಾಮಿಯವರ ಮನಸ್ಸಿನಲ್ಲಿರುವ ಭಾವನೆಯನ್ನೇ ಅವರು ಹೊರ ಹಾಕಿದ್ದಾರೆ. ಇದಕ್ಕೆ ತಕ್ಕ ಪಾಠವನ್ನು ಜನತೆ ಈ ಬಾರಿ ಜೆಡಿಎಸ್ ಮತ್ತು ಬಿಜೆಪಿಗೆ ಕಲಿಸಲಿದ್ದಾರೆ. ಇದು ನಾಡಿನ ಮಹಿಳೆಯರಿಗೆ ಮಾಡಿದ ಅವಮಾನ ಇಂಥ ಯೋಜನೆಗೆ ಈ ರೀತಿ ಹೇಳಿಕೆ ಕೊಡುವುದು ಖಂಡನೀಯ.
ಬಿಜೆಪಿ ಸಖ್ಯ ಮಾಡಿದ ಮೇಲೆ ಬಿಜೆಪಿ ಮನುವಾದ ಕುಮಾರಸ್ವಾಮಿಯವರಿಗೂ ತಟ್ಟಿದಂತೆ ಕಾಣುತ್ತಿದೆ. ಸ್ತ್ರೀಯರನ್ನು ಮಾತೃ ಸ್ವರೂಪದಲ್ಲಿ ಕಾಣುವವರು ನಾವು. ಇಂತಹ ಕೀಳು ಮಟ್ಟದ ಹೇಳಿಕೆಯನ್ನು ನೀಡಿರುವ ಕುಮಾರಸ್ವಾಮಿಯವು ರಾಜ್ಯದ ಮಹಿಳೆಯರ ಬಳಿ ಕ್ಷಮೆ ಕೇಳಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.