ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಾಲಯದ (Kolluru Mookambika Temple) ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ (National Highway) ನಿರ್ಮಾಣಕ್ಕಾಗಿ ಕೈಗೊಂಡಿರುವ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ದೇವಾಲಯ ಸುತ್ತಲಿನ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿ ಸ್ಥಳೀಯ ನಿವಾಸಿ ಗುರುಪ್ರಸಾದ್ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ. ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ.ದಳವಾಯಿ ವಾದ ಮಂಡಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ದೇವಾಲಯದ ಸುತ್ತಲಿನ ಸರ್ವೇ ನಂಬರ್ 12ರಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಚಿವಾಲಯ 2023ರ ಅಕ್ಟೋಬರ್ 10 ರಂದು ಅಧಿಸೂಚನೆ ಹೊರಡಿಸಿದೆ.
ದೇವಸ್ಥಾನದ ಸಮೀಪದಲ್ಲೇ ಹೆದ್ದಾರಿ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ನಿತ್ಯ 15 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಇದರಿಂದ ದೇವಸ್ಥಾನದ ಕಟ್ಟಡಕ್ಕೆ ಅಪಾಯ ವಾಗಲಿದ್ದು, ಗರ್ಭಗುಡಿ ಕಂಪಿಸಲಿದೆ. ಹಾಗೆಯೇ, ದೇವಸ್ಥಾನದ ಧಾರ್ಮಿಕ ರಥೋತ್ಸವ ನೇರವೇರಿಸಲು ಅಡ್ಡಿಯಾಗುತ್ತದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.