ಕೃಷಿಕನ ಶ್ರಮದ ಬೆವರು ಒಂದು ದಿನ ಹರಿಯದಿದ್ದರೂ ಜಗತ್ತಿನಲ್ಲಿ ಜನ ಸಾಮಾನ್ಯರ ಹೊಟ್ಟೆ ಹೊರೆಯುವುದು ಬಹಳಾ ಕಷ್ಟವಿದೆ. ನಾವು ಕೃಷಿಕರಲ್ಲದೇ ಇರಬಹುದು. ಆದರೆ ಪ್ರತಿಯೊಬ್ಬರೂ ಆತನನ್ನು ಅವಲಂಬಿಸಿಯೇ ಬದುಕುತ್ತಿರುವವರಾದ್ದರಿಂದ ಆತನ ಶ್ರಮಕ್ಕೆ, ಬೆವರಿಗೆ ಗೌರವ ಕೊಡಲು ವರ್ಷವಿಡೀ ಹೀಗೆ ಮಾಡೋಣ…
- ಅವಶ್ಯಕವಾದ ಇದ್ದಷ್ಟೇ ಆಹಾರ ತೆಗೆದುಕೊಂಡು ಒಂದಿಷ್ಟನ್ನೂ ತಟ್ಟೆಯಲ್ಲಿ ವ್ಯರ್ಥಮಾಡದೇ ಊಟ/ತಿಂಡಿ ಮಾಡೋಣ.
- ವರ್ಷಕ್ಕೆ ಕನಿಷ್ಠ ಒಂದಾದರೂ ಗಿಡ ನೆಟ್ಟು, ನೀರೆರದು ಪ್ರೀತಿಯಿಂದ ಬೆಳೆಸಿ ಪರಿಸರವನ್ನು ಇನ್ನಷ್ಟು ಹಸಿರಾಗಿಸೋಣ.
- ಮಕ್ಕಳನ್ನು ಮಣ್ಣಿನಲ್ಲಿ ಆಟವಾಡಲು ಬಿಟ್ಟು ಮಣ್ಣಿನೊಡನೆ ಬಂಧ ಬೆಸೆಯಲು ಪ್ರಯತ್ನಿಸೋಣ. ಇದರಿಂದ ಮಕ್ಕಳ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
- ಆಗಾಗ್ಗೆ ಮಕ್ಕಳನ್ನು ತೋಟ, ಗದ್ದೆಗಳಿಗೆ ಕರೆದುಕೊಂಡು ಹೋಗಿ ಸಾಧ್ಯವಾದರೆ ಸಣ್ಣಪುಟ್ಟ ಕೆಲಸಗಳನ್ನು ಅವರಿಂದಲೂ ಮಾಡಿಸಿ ಅವರಿಗೂ ಕಷ್ಟದ ಅರಿವಾಗಲಿ.
- ವಿಶೇಷ ಸಂದರ್ಭಗಳಲ್ಲಿ ಅನುಪಯುಕ್ತ ಉಡುಗೊರೆಗಳನ್ನು ನೀಡುವ ಬದಲಾಗಿ ಆ ಸಂದರ್ಭಗಳ ನೆನಪಿಗೆ ಗಿಡಗಳನ್ನು ನೀಡುವ/ನೆಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳೋಣ.
- ನಾವು ಕೃಷಿಕರಲ್ಲದೇ ಹೋದರೂ ಅಪರೂಪಕ್ಕೆ ಅವಕಾಶಗಳನ್ನು ಸೃಷ್ಟಿಸಿಕೊಂಡು ಕೃಷಿ ಚಟುವಟಿಕೆಗಳಿಗೆ ಹೆಗಲು ನೀಡೋಣ.
- ಪರಿಸರ/ಕೃಷಿಗೆ ಮಾರಕವಾದ ಪ್ಲಾಸ್ಟಿಕ್ ಬಳಸದೇ ನಮ್ಮ ಪರಿಸರಕ್ಕೆ ನಮ್ಮ ಕೈಲಾದ ಕೊಡುಗೆ ನೀಡೋಣ.
- ಎಲ್ಲಕ್ಕಿಂತಲೂ ಮೊದಲು ಕೃಷಿಯನ್ನು, ಕೃಷಿಕರನ್ನು ಅಸಡ್ಡೆಯಿಂದ ನೋಡುವ ಮನೋಭಾವದಿಂದ ಹೊರಬರೋಣ.