ಉಡುಪಿ: ರಾಜ್ಯದ ಮುಖ್ಯಮಂತ್ರಿಗಳು ಮೂರು ದಿನ ದೆಹಲಿಯಲ್ಲಿದ್ದು ಕಾವೇರಿ ನೀರು ಹಂಚಿಕೆ ಕುರಿತಾಗಿ ಚರ್ಚೆ ಮಾಡಿದ್ದಾರೆ. ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್ ನ ಆದೇಶವನ್ನು ನಾವು ಪಾಲಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆಗಾಗಿ ಪ್ರಾರ್ಥಿಸಬೇಕು. ರಾಜ್ಯಕ್ಕೆ ಅನ್ಯಾಯ ಆಗಬಾರದು ಎಂಬುದು ನನ್ನ ನಿಲುವಾಗಿದೆ. ಕಾಂಗ್ರೆಸ್ ಜನಪರವಾಗಿದ್ದು, ಜನರನ್ನು ಬಿಟ್ಟು ಬೇರೆ ಏನು ಮಾಡಲು ಸಾಧ್ಯವಿಲ್ಲ. ನೀರಾವರಿ ಮಂತ್ರಿಗಳು ಹಾಗೂ ಆ ಭಾಗದ ಜನನಾಯಕರು ಕೇಂದ್ರಕ್ಕೆ ಹೋಗಿದ್ದಾರೆ, ರಾಜ್ಯ ಸರ್ಕಾರ ಈ ಬಗ್ಗೆ ಕೈಕಟ್ಟಿ ಕುಳಿತಿಲ್ಲ. ರಾಜ್ಯದ ರೈತರ ಹಿತ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆ ರಿಯಾಗಿದೆಯೋ ಇಲ್ಲವೋ ಎನ್ನುವ ಚರ್ಚೆ ಅಪ್ರಸ್ತುತವಾಗಿದೆ ಮುಂದೆ ಏನಾಗಬೇಕು ಎಂಬುದಷ್ಟೇ ಸದ್ಯ ಚರ್ಚಿಸಬೇಕಾದ ವಿಚಾರ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 14 ತಾಲ್ಲೂಕುಗಳು ಬರ ಪಟ್ಟಿಯಲ್ಲಿದ್ದು, ಬರಪೀಡಿತ ಪಟ್ಟಿ ಘೋಷಣೆ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಮಳೆ ಪ್ರಮಾಣ ಅಂಕಿ ಅಂಶಗಳನ್ನು ತೆಗೆದುಕೊಂಡು ಘೋಷಣೆ ಮಾಡಲಾಗುತ್ತದೆ. ಎರಡನೇ ಲಿಸ್ಟ್ ಹೊರಬರುತ್ತದೆ, ಮಳೆ ಬರದಿದ್ದರೆ ಇನ್ನೂ ಕೆಲ ಜಿಲ್ಲೆ ಹೆಸರುಗಳು ಕೂಡ ಘೋಷಣೆಯಾಗುತ್ತದೆ ಎಂದರು.