ಹಾಸನ: ಖಾಸಗಿ ಬಸ್ – ಲಾರಿ ನಡುವೆ ಅಪಘಾತ; ಕುಂದಾಪುರದ ವ್ಯಕ್ತಿ ಮೃತ್ಯು.

ಹಾಸನ: ಹಿರೀಸಾವೆಯ ಅಮ್ಮಕುಟೀರ ಬಡಾವಣೆ ಬಳಿ ಮಂಗಳವಾರ ಬೆಳಗಿನ ಜಾವ 4-30 ಕ್ಕೆ ಖಾಸಗಿ ಬಸ್ ಮತ್ತು ಲಾರಿ ನಡುವೆ ಅಪಘಾತ ನಡೆದು, ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, 8 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಬಸ್ ನಲ್ಲಿದ್ದ ಕುಂದಾಪುರದ ಕೃಷ್ಣ ಶೆಟ್ಟಿ ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ 8ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ದುರ್ಗಾಂಬ ಟ್ರಾವೆಲ್ ಗೆ ಸೇರಿದ ಬಸ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಒಂದನ್ನು ಹಿಂದಿಕ್ಕಿ, ಮುಂದೆ ಹೋಗುತ್ತಿತ್ತ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆದಿಚುಂಚನಗಿರಿ ಮತ್ತು ಇತರೆ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಸೇರಿ ಒಟ್ಟು 32 ಮಂದಿ ಇದ್ದರು ಎಂದು ಎಸ್ ಐ ರೂಪಾದೇವಿ ಮಾಹಿತಿ ನೀಡಿದ್ದಾರೆ.