ಪುತ್ತಿಗೆ ಪರ್ಯಾಯ: ಕರ್ನಾಟಕ ಬ್ಯಾಂಕ್ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಹೊರೆ ಕಾಣಿಕೆ ಸಮರ್ಪಣೆ

ಉಡುಪಿ: ಪುತ್ತಿಗೆ ಮಠದ ಪರ್ಯಾಯವು (Puttige Paryaya) ಜ.18ರಂದು ನಡೆಯಲಿದ್ದು ಪರ್ಯಾಯ ಸಂಭ್ರಮದ ಪೂರ್ವಭಾವಿಯಾಗಿ ಕಳೆದ ಮೂರು ದಿನಗಳಿಂದ ವಿವಿಧ ಸಂಘಟನೆಗಳು ಹಾಗೂ ಗ್ರಾಮಗಳ ವತಿಯಿಂದ ಹಸಿರು ಹೊರೆ ಕಾಣಿಕೆ ಸಮರ್ಪಣಾ ಕಾರ್ಯ ನಡೆಯುತ್ತಿದ್ದು, ಗುರುವಾರದಂದು ಕರ್ನಾಟಕ ಬ್ಯಾಂಕ್ ವತಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕರ್ನಾಟಕ ಬ್ಯಾಂಕ್ ಮಾತ್ರವಲ್ಲದೇ, ಪುತ್ತಿಗೆ ಮೂಲಮಠ, ಕಾರ್ಕಳ ತಾಲೂಕು, ಹೆಬ್ರಿ ತಾಲೂಕು, ಪೆರ್ಡೂರು ವಲಯ, ಆತ್ರಾಡಿ ವಲಯ, ಹಿರಿಯಡ್ಕ ವಲಯ, ಪರ್ಕಳ ವಲಯ, ಮಣಿಪಾಲದ ಗ್ರಾಮಸ್ಥರು, ಬಸ್ ಎಜೆಂಟ್‌ಗಳ ಸಂಘದ ವತಿಯಿಂದಲೂ ಹಸಿರು ಹೊರೆ ಕಾಣಿಕೆಯನ್ನು ಮೆರವಣಿಗೆಯಲ್ಲಿ ತಂದು ಅರ್ಪಿಸಲಾಯಿತು.

ಮೆರವಣಿಗೆಯು ಜೋಡುಕಟ್ಟೆಯಿಂದ ಪ್ರಾರಂಭಗೊಂಡು ಡಯಾನ ವೃತ್ತದಿಂದ ಕೆ.ಎಂ.ಮಾರ್ಗ, ತ್ರಿವೇಣಿ ವೃತ್ತದ ಮೂಲಕ ಕನಕದಾಸ ರಸ್ತೆಯಲ್ಲಿ ಸಾಗಿ ರಥಬೀದಿ ಮೂಲಕ ಉಗ್ರಾಣಕ್ಕೆ ತೆರಳಿತು. ಪುತ್ತಿಗೆ ಮಠದ ವತಿಯಿಂದ ಹೊರೆ ಕಾಣಿಕೆ ತಂದ ಪ್ರಮುಖರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.