ಕಾರ್ಕಳ ಕಡಾರಿಯ ರೈತ ಮಾಡಿದ ಕೈ ಪಂಪು : ತೋಟವೆಲ್ಲಾ ತಂಪು ತಂಪು

ಕಾರ್ಕಳ ತಾಲೂಕಿನ ಪುಟ್ಟದಾದ ಸುಂದರ ಊರು ಕಡಾರಿ. ಎಲ್ಲೆಲ್ಲೂ ಹಸಿರೇ ತುಂಬಿರುವ ಈ ಊರಿನ ಒಂದು ಬದಿಯಲ್ಲಿ ಹರಿಯುವ ಸ್ವರ್ಣ ನದಿ. ನೂರು ಮೀಟರ್ ದೂರದಲ್ಲಿ ಕಡಾರಿ ಸೇತುವೆ, ಅದರ ಕೆಳಭಾಗದಲ್ಲಿ ಸ್ವರ್ಣೆಗೆ ಕಟ್ಟಿದ ಕಿಂಡಿ ಅಣೆಕಟ್ಟು.

ಅಲ್ಲೇ ಪಕ್ಕದಲ್ಲಿದೆ  ಜಯರಾಮ್ ಪ್ರಭು ಅವರ ಸಣ್ಣ ಅಡಕೆ ತೋಟ, ಹಾಗೂ ಮನೆ. ಅವರ ತಮ್ಮ ಜಗದೀಶ್ ಪ್ರಭು ಅವರು ರೈತ ರಾಗಿದ್ದು  ಕೈ ಪಂಪು ಆವಿಷ್ಕರಿಸಿ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಹೌದು. ಜಗದೀಶ್ ಪ್ರಭು ಅವರು ತಮ್ಮ ಮನೆಯ ಬಾವಿಯಲ್ಲಿ ನೀರೆತ್ತಲು ಕೈಪಂಪನ್ನು ಆವಿಷ್ಕಾರ ಮಾಡಿ  ಎಲ್ಲರ ಮನೆ ಮಾತಾಗಿದ್ದಾರೆ.

ಯಾವುದೇ ವಿದ್ಯುತ್ ಶಕ್ತಿ ಯ ಅವಶ್ಯಕತೆ ಇಲ್ಲದೇ, ಯಾವುದೇ ಕಷ್ಟವಿಲ್ಲದೆ ಸುಲಭದಲ್ಲಿ ,ಆ ಪಂಪ್ ನ  ನೀರು ಸೇದಬಹುದು. ಆ ನೀರನ್ನು ತೋಟಕ್ಕೆ ಬಳಸಿ ತೋಟವನ್ನೂ ತಂಪು ಮಾಡಬಹುದು.

ಕೈ ಪಂಪಿನ ಬಗೆಗೊಂದಿಷ್ಟು:

ಸುಮಾರು  ನೂರು ಅಡಿ ಆಳವಿರುವ ಬಾವಿ . ಬಾವಿಯ ಮೇಲ್ಮೈ ಯಿಂದ ಅಡಿ ಭಾಗದ ವರೆಗೆ 90 ಅಡಿ ಆಳದ ಎರಡು ಇಂಚು ದಪ್ಪದ ಪೈಪು ಅಳವಡಿಸಿದ್ದಾರೆ. ಕೆಳ ಪೈಪ್ ನ ಕೆಳಭಾಗದಲ್ಲಿ ನೀರು ಮೇಲೆ ಎಳೆದರೆ ಕೆಳಭಾಗಕ್ಕೆ ಹೊರಹೋಗದಂತೆ ಪೂಟ್ ವಾಲ್ ಅಳ ವಡಿಸಿದ್ದಾರೆ. ನೀರನ್ನು ‌ಮೇಲಕ್ಕೆತ್ತಲು‌ ಅನುಕೂಲವಾಗುವಂತೆ, 80 ಅಡಿ ಉದ್ದದ ಅರ್ಧ ಇಂಚು ಪೈಪ್ ನ್ನು  ಎರಡಿಂಚು ದಪ್ಪದ ಪೈಪ್ ಗೆ ಅಳವಡಿಸಲಾಗಿದೆ.  ಒಳಬಾಗದಲ್ಲಿ ಅಳವಡಿಸಲಾದ ಅರ್ಧ ಇಂಚು ಪೈಪಿಗೆ ಕೆಳಭಾಗದಲ್ಲಿ ರಬ್ಬರ್‌ನ ವಾಶರ್ ಅಳವಡಿಸಲಾಗಿದೆ . ಮೇಲ್ಮುಖ  ಹಾಗೂ ಕೆಳಮುಖವಾಗಿ  ಅರ್ಧ ಇಂಚಿನ ಪೈಪನ್ನು ಚಾಲನೆಗೆ ಒಳಪಡಿಸಿದಾಗ ಗಾಳಿಯ ಒತ್ತಡದಿಂದ  ನೀರು ಮೇಲ್ಮುಖವಾಗಿ ಚಲಿಸುತ್ತದೆ. ಪೂಟ್ವಾಲ್ ತೆರೆದು ನೀರಿನ ಹರಿವು ಮೇಲ್ಮುಖ ವಾಗಿ ಹರಿಯಲು ಅನುವು ಮಾಡಿಕೊಡುತ್ತದೆ. ನೀರಿನ ಅಗತ್ಯತೆ ನಿಲ್ಲಿಸಿದ ಬಳಿಕ  ಪುಟ್ವಾಲ್ ತನ್ನಷ್ಟಕ್ಕೇ ನೀರಿನ ಹರಿವನ್ನು ನಿಯಂತ್ರಿಸುತ್ತದೆ.

ಇದು ಪುಟ್ಟ ಅನ್ವೇಷಣೆಯಾದರೂ ಕಡಾರಿಯ ರೈತನ ನೀರು ಸೇದುವ ತಂತ್ರಜ್ಞಾನ ಎಲ್ಲರಲ್ಲೂ ಅಚ್ಚರಿ ಹುಟ್ಟುಹಾಕಿದೆ. ಜಯರಾಂ ಪ್ರಭು ಹಾಗು ಜಗದೀಶ್ ಪ್ರಭು ಅವರಂತಹ ಊರಿನ  ರೈತರ ಜಾಣ್ಮೆಗೆ ನಿಮ್ಮ ಮೆಚ್ಚುಗೆ ಇರಲಿ. ಜಗದೀಶ ಪ್ರಭು ಅವರ ಸಂಪರ್ಕ:9880798912

                                                                                             –  ರಾಮ್ ಅಜೆಕಾರು