ಉಡುಪಿ: ಶಿವಮೊಗ್ಗದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹಿಂದೂ ಸಂಘಟನೆಗಳ ಮುಖಂಡ ಹರ್ಷನ ಮನೆಗೆ ಶುಕ್ರವಾರ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿ ಆಶೀರ್ವಾದಗೈದರು.
ಹರ್ಷನ ಅಗಲುವಿಕೆಯಿಂದ ಆತನ ಹತ್ತವರು ಅನುಭವಿಸುತ್ತಿರುವ ನೋವು ದುಃಖದಲ್ಲಿ ನಮಗೆ ಸಹಾನುಭೂತಿ ಇದೆ. ಇಂಥಹ ಹೇಯಕೃತ್ಯಗಳ ಮೂಲಕ ನಮ್ಮ ಸಂಘಟನೆಗಳ ನೈತಿಕಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವುದನ್ನು ಖಂಡಿಸುತ್ತೇವೆ. ಸರ್ಕಾರ ಮತ್ತು ಕಾನೂನು ಹರ್ಷನ ಸಾವಿಗೆ ನ್ಯಾಯ ಕೊಡಿಸುವುದೆಂಬ ವಿಶ್ವಾಸದಲ್ಲಿದ್ದೇವೆ. ಭಗವಂತನು ಆತನ ಹತ್ತವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ಕರುಣಿಸಲಿ. ಈ ಸಂದರ್ಭದಲ್ಲಿ ಸಮಾಜ, ಸಂಘ ಸಂಸ್ಥೆಗಳು ಸರ್ಕಾರ, ಸಾಧು ಸಂತರು ಅನೇಕ ವಿಧದಲ್ಲಿ ಹರ್ಷನ ಪೋಷಕರಿಗೆ ಸಾಂತ್ವನ ನೀಡಿರುವುದನ್ನು ಕಂಡು ಸಮಾಧಾನವಾಗಿದೆ.
ಇಂಥಹ ದುರ್ಘಟನೆಗಳು ಮುಂದೆ ನಡೆಯದಿರಲಿ ಎಂದು ಪ್ರಾರ್ಥಿಸುತ್ತೇವೆ. ಎಂದು ಶ್ರೀಗಳು ನುಡಿದರು .
ಇದೇ ಸಂದರ್ಭದಲ್ಲಿ ಕೆಲವರ್ಷಗಳ ಹಿಂದೆ ಕೋಮು ಸಂಘರ್ಷವೊಂದರಲ್ಲಿ ಪ್ರಾಣ ಕಳೆದುಕೊಂಡ ಹಿಂದೂ ಕಾರ್ಯಕರ್ತ ವಿಶ್ವನಾಥನ ಮನೆಗೂ ಶ್ರೀಗಳು ಭೇಟಿ ನೀಡಿ ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಆತನ ತಾಯಿಯನ್ನು ಭೇಟಿಯಾಗಿ ಸಾಂತ್ವನ ಹೇಳೆ ಧೈರ್ಯ ತುಂಬಿದರು. ಪತ್ರಿಕೆಯೊಂದರ ಮೂಲಕ ಈ ವಿಚಾರ ತಿಳಿದ ಶ್ರೀಗಳು ಈ ಭೇಟಿಯನ್ನು ನಿರ್ಧರಿಸಿದ್ದರು.
ಮಾನವೀಯತೆ ದಯೆ ಅನುಕಂಪಗಳು ಪ್ರಚಾರಕ್ಕೆ ಮಾತ್ರ ಎಂಬಂತಾಗಬಾರದು. ವಿಶ್ವನಾಥನ ಮರಣದ ಸಂದರ್ಭ ಅನೇಕ ಭರವಸೆ ನೀಡಿದ ಮಂದಿ ಒಂದಷ್ಟನ್ನು ಒದಗಿಸಿದ್ದರೂ ಇವತ್ತು ಈ ಹಿರಿ ಜೀವ ಇಷ್ಟು ಬವಣೆ ಪಡುವ ಅಗತ್ಯ ಇರಲಿಲ್ಲ ಎಂದನಿಸುತ್ತಿದೆ.
ಇದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಸಮಾಜ ಈ ಕುಟುಂಬಕ್ಕೂ ಒಂದಷ್ಟು ನೆರವಾಗಬೇಕು ಎಂದು ಶ್ರೀಗಳು ಆಶಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಮಠದ ವತಿಯಿಂದ ಮೃತ ಹರ್ಷನ ಹೆತ್ತವರಿಗೆ ಹತ್ತು ಸಾವಿರ ರೂ, ಹಾಗೂ ವಿಶ್ವನಾಥನ ತಾಯಿ ಮೀನಾಕ್ಷಮ್ಮನಿಗೆ ಒಂದು ಲಕ್ಷ ರೂ. ಸಾಂತ್ವನ ನಿಧಿ ನೀಡಿ ಫಲ ಮಂತ್ರಾಕ್ಷತೆಯಿತ್ತು ಆಶೀರ್ವದಿಸಿದರು. ಗೋಸಾಯಿ ಮಠದ ಸ್ವಾಮೀಜಿ ಶ್ರೀಗಳ ಆಪ್ತರಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಹಾಗೂ ಸಂಘಟನೆಗಳ ಪ್ರಮುಖರಿದ್ದರು.