ಸೌದಿ ದೊರೆಯ ವಿರುದ್ಧ ಫೋಸ್ಟ್ ಪ್ರಕರಣ: ಎರಡು ವರ್ಷದ ಬಳಿಕ ತಾಯ್ನಾಡಿಗೆ ಮರಳುತ್ತಿರುವ ಕುಂದಾಪುರದ ಹರೀಶ್‌ ಬಂಗೇರ.!

ಉಡುಪಿ: ಸೌದಿ ಅರೇಬಿಯಾದ ದೊರೆಯ ವಿರುದ್ಧ ಪೋಸ್ಟ್‌ ಮಾಡಲಾಗಿದೆ ಎಂಬ ಆರೋಪದಡಿ ಸೌದಿ ಪೊಲೀಸರಿಂದ ಬಂಧಿತನಾಗಿರುವ ಕುಂದಾಪುರದ ಬೀಜಾಡಿಯ ಹರೀಶ್‌ ಬಂಗೇರ ಅವರು ಇದೇ ಆಗಸ್ಟ್ 18 ರಂದು ಬೆಂಗಳೂರು ತಲುಪಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಹರೀಶ್ ಬಂಗೇರ ತಾಯ್ನಾಡಿಗೆ ಮರಳಲು ಬೇಕಾದ ಎಲ್ಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಆಗಸ್ಟ್ 17ರಂದು ಸೌದಿ ಅರೇಬಿಯಾದ ದಮಾಮ್ ವಿಮಾನ ನಿಲ್ದಾಣದಿಂದ ದೋಹಾಗೆ ಹೋಗಿ ದೋಹಾ ಮೂಲಕ ಆಗಸ್ಟ್ 18ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ಸೌದಿ ಅರೇಬಿಯಾ ದ ರಿಯಾದ್ ನಲ್ಲಿರುವ ಭಾರತೀಯ ದೂತವಾಸದಿಂದ ಅಧಿಕೃತ ಮಾಹಿತಿ ಬಂದಿದೆ ಅವರು ತಿಳಿಸಿದ್ದಾರೆ.

ಏನಿದು ಪ್ರಕರಣ?:
ಹರೀಶ್‌ ಬಂಗೇರ ಅವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ್ದರು. ಅಲ್ಲದೆ, ಆ ಬಳಿಕ ಅದರ ಸ್ಕ್ರೀನ್‌ ಶಾಟ್‌ ತೆಗೆದು ಖಾತೆಯನ್ನು ಡಿಲೀಟ್‌ ಮಾಡಿದ್ದರು. ಇದು ಹರೀಶ್‌ ಅವರೇ ಹಾಕಿದ ಪೋಸ್ಟ್‌ ಎಂದು ತಿಳಿದು ಸೌದಿ ಪೊಲೀಸರು 2019ರ ಡಿಸೆಂಬರ್‌ನಲ್ಲಿ ಆತನನ್ನು ಬಂಧಿಸಿದ್ದರು.

ನಕಲಿ ಖಾತೆ ತೆರೆದ ಬಗ್ಗೆ ಉಡುಪಿ ಸೆನ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ತನಿಖೆ ನಡೆಸಿದ ಉಡುಪಿ ಪೊಲೀಸರು ಆರೋಪಿಗಳಾದ ಮೂಡುಬಿದಿರೆಯ ಅಬ್ದುಲ್‌ ಹುಯೇಸ್‌ ಹಾಗೂ ತುವೇಸ್‌ ನನ್ನು ಬಂಧಿಸಿದ್ದರು. ಈ ಸಹೋದರರಿಬ್ಬರು ಹರೀಶ್‌ ಹೆಸರಲ್ಲಿ ನಕಲಿ ಖಾತೆ ತೆರೆದು ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ್ದರು. ಸದ್ಯ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.