ಕುಂದಾಪುರ: ಕರ್ಫ್ಯೂ ಮೊದಲ ದಿನವಾದ ಮಂಗಳವಾರ ರಸ್ತೆಗಳಿದ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದೇವೆ. ಕರೋನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬಹುತೇಕರಿಗೆ ಪರಿಸ್ಥಿತಿಯ ಅರಿವಿದೆ. ಬೆರಳೆಣಿಕೆಯಷ್ಟು ಜನ ಜಿಲ್ಲಾಡಳಿತದ ಆದೇಶಗಳನ್ನು ಪಾಲಿಸುತ್ತಿಲ್ಲ. ಇದು ಹೀಗೆ ಮುಂದವರೆದರೆ ಲಾಠಿ ರುಚಿ ತೋರಿಸಬೇಕಾಗುತ್ತದೆ ಎಂದು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಹೇಳಿದ್ದಾರೆ.
ಮಂಗಳವಾರ ಮಧ್ಯಾಹ್ನ ಕುಂದಾಪುರದ ಎಎಸ್ಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಕೋರೋನಾ ಹರಡುವಿಕೆ ತಡೆಗಟ್ಟುವಿಕೆಯಲ್ಲಿ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಅವರು ಮಾಹಿತಿ ನೀಡಿದರು.
ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಒಗ್ಗೂಡುವಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ಬೆಳಿಗ್ಗೆಯೂ ಸಹಾಯಕ ಆಯುಕ್ತರು, ತಾಲೂಕು ಆರೋಗ್ಯಾಧಿಕಾರಿ ಹಾಗೂ ನನ್ನ ನೇತೃತ್ವದಲ್ಲಿ ಸಭೆ ನಡೆಸಿ ಮುಂಜಾಗೃತಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಕೊರೋನಾ ವಿಚಾರದಲ್ಲಿ ತಾಲೂಕಿನ ಜನರು ಭಯ ಪಡುವ ಅಗತ್ಯವಿಲ್ಲ. ಪೊಲೀಸರು ಜನರನ್ನು ಮನೆಗೆ ಕಳಿಸುತ್ತಿರುವುದು ಜನರ ಆರೋಗ್ಯದ ಕಾಳಜಿಯಿಂದಾಗಿದೆ. ಇದಕ್ಕೆ ನಾಗರಿಕರು ಸಹಕಾರ ನೀಡಬೇಕು ಎಂದರು.
ನಿಯಮ ಉಲ್ಲಂಘಿಸಿದರೆ ಜೈಲು: ಎಎಸ್ಪಿ ಹರಿರಾಂ ಶಂಕರ್
ಸದ್ಯ ಇರುವ ಕರ್ಫ್ಯೂ ಜನತಾ ಕರ್ಫ್ಯೂ ರೀತಿ ಅಲ್ಲ. ತುರ್ತು ಪರಿಸ್ಥಿತಿಯ ಕಾರಣಕ್ಕೆ ಸರಕಾರದ ಆದೇಶದಂತೆ ನಡೆಯುತ್ತಿದ್ದು ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸುತ್ತಿದೆ. ಅನಗತ್ಯವಾಗಿ ಕಾನೂನು ಉಲ್ಲಂಘಿಸಿದರೆ ಪ್ರಕರಣ ದಾಖಲಾಗಿ ಜೈಲಿಗೆ ಹೋಗುವುದು ಖಚಿತ. ಇನ್ನು ಹೋಂ ಕ್ವಾರಂಟೈನ್ ಒಳಪಟ್ಟವರು ತಿರುಗಾಡುವ ಬಗ್ಗೆ ಮಾಹಿತಿಯಿದ್ದ ಹಿನ್ನೆಲೆ ಇಲಾಖೆ ಮುಂಜಾಗೃತಾ ಕ್ರಮವಹಿಸಿ ಅವರ ಮನೆಯಲ್ಲಿ ನೋಟಿಸ್ ಅಂಟಿಸಲಾಗುತ್ತಿದ್ದು ಈ ಸಮಸ್ಯೆ ಬಗೆಹರಿಯಲಿದೆ. ಬೈಂದೂರಿನ ಶಿರೂರು, ಹೊಸಂಗಡಿ, ಸೇರಿದಂತೆ ಮೂರು ಚೆಕ್ ಪೋಸ್ಟ್ಗಳಲ್ಲಿ ಖಾಸಗಿ ವಾಹನ, ಬೈಕ್ ಸೇರಿದಂತೆ ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಚೆಕ್ ಪೋಸ್ಟ್ಗಳಲ್ಲಿ ಡಿಸಿ ಆದೇಶದಂತೆ ತರಕಾರಿ ಗೂಡ್ಸ್, ಹಾಲಿನ ಗಾಡಿ ಅಲ್ಲದೇ ತುರ್ತು ಸೇವೆಗೆ ಅಗತ್ಯವಾದ ವಾಹನಗಳಿಗೆ ಪ್ರವೇಶ ನೀಡಲಾಗುತ್ತಿದೆ. ಭಾರತ ದೇಶದಲ್ಲಿ ಜನ ಸಾಂದ್ರತೆ ಹೆಚ್ಚಿದ್ದು ಒಂದಷ್ಟು ದಿನ ಸರಕಾರದ ನಿರ್ದೇಶನ ಪಾಲನೆ ಮಾಡುವುದು ಅತ್ಯಗತ್ಯವಾಗಿದೆ. ಆರೋಗ್ಯ ಸಹಾಯಕಿಯರಿಗೆ, ಸೆಕ್ಯೂರಿಟಿ ಕೆಲಸ ಮಾಡುವವರಿಗೆ ಕರ್ಫ್ಯೂ ಪಾಸ್ ನೀಡಲಾಗುತ್ತಿದೆ ಎಂದರು.
ಅಗತ್ಯ ಬಿದ್ದರೆ ಲಾಠಿ ಪ್ರಯೋಗ.
ಅನಗತ್ಯವಾಗಿ ಗುಂಪು ಸೇರಿ ಜನರು ಬಂದಲ್ಲಿ ಅಂತವರಿಗೆ ಮೊದಲಿಗೆ ಮಾಹಿತಿ, ಅರಿವು ನೀಡಲಾಗುತ್ತದೆ. ಇದೆಲ್ಲದರ ನಡುವೆಯೂ ಆದೇಶ ಮೀರಿ ಸುಮ್ಮನೆ ಓಡಾಟ ಮಾಡುವುದು ಸೇರಿದಂತೆ ಕಾನೂನು ಮೀರಿದರೆ ಇತರೆ ಜನರ ಹಿತದೃಷ್ಟಿಯಿಂದ ನಾವು ದಂಡ ಪ್ರಯೋಗ ಮಾಡುವುದು ಅನಿವಾರ್ಯವಾಗುತ್ತದೆ. ಆದರೆ ಉಡುಪಿ ಕುಂದಾಪುರದ ಜನರು ಬುದ್ಧಿವಂತರಾಗಿದ್ದು ಜನಸ್ನೇಹಿ ವ್ಯವಸ್ಥೆಯಲ್ಲಿ ಕಾರ್ಯಚರಿಸುತ್ತಿರುವ ಪೊಲೀಸ್ ಇಲಾಖೆಗೆ ಸ್ಪಂದನೆ ನೀಡುವ ವಿಶ್ವಾಸವಿದೆ. ಪೊಲೀಸರು ಕೂಡ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದು ಪೊಲೀಸರನ್ನು ನಿಂದಿಸುವ ಮತ್ತು ಕಾನೂನು ಉಲ್ಲಂಘಿಸುವ ಕೆಲಸಕ್ಕೆ ಕೈ ಹಾಕಬಾರದು ಎಂದು ಎಎಸ್ಪಿ ಹೇಳಿದ್ದಾರೆ.
ಹಾಲು ತರಕಾರಿ ಸಿಗುತ್ತೆ: ಎಎಸ್ಪಿ
ಆಸ್ಪತ್ರೆ, ಮೆಡಿಕಲ್, ತರಕಾರಿ, ಹಾಲು ಸೇರಿದಂತೆ ನಿತ್ಯ ಬಳಕೆ ಅಂಗಡಿಗಳು ನಿತ್ಯ ತೆರೆದಿರುತ್ತದೆ. ಅದಕ್ಕಾಗಿ ಜನರು ಭಯಪಡುವ ಅಗತ್ಯವಿಲ್ಲ. ತೆರೆದಿರುವ ಇಂತಹ ಅಗತ್ಯ ಅಂಗಡಿಗಳಲ್ಲಿ ಜನರು ಗುಂಪುಗೂಡಿಕೆ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಜನರು ಗುಂಪುಗುಂಪಾಗಿ ಬರಬಾರದು. ಅನಗತ್ಯ ಗೊಂದಲ ಜನರಲ್ಲಿ ಬೇಡ. ಅಗತ್ಯವಿಲ್ಲದಿದ್ದರೆ ಮನೆಯಿಂದ ಹೊರಗಡೆ ಬರುವುದು ಸರಿಯಲ್ಲ.
ಕಳ್ಳತನದ ಬಗ್ಗೆ ಎಚ್ಚರವಿರಲಿ…!
ದೇವಸ್ಥಾನ ಹಾಗೂ ಸಹಕಾರಿ ಸೊಸೈಟಿಗಳು, ಚಿನ್ನಂದಗಡಿಗಳು ಬಂದ್ ಇರುವ ಕಾರಣ ಕಳ್ಳತನದಂತಹ ಪ್ರಕರಣಗಳು ನಡೆಯುವ ಸಾಧ್ಯತೆ ಇರುವ ಹಿನ್ನೆಲೆ ದೇವಸ್ಥಾನಗಳಲ್ಲಿ ರಾತ್ರಿ ಮಲಗುವ ವ್ಯವಸ್ಥೆಯನ್ನು ಸಂಬಂದಪಟ್ಟವರು ಮಾಡಬೇಕು. ಈಗಾಗಲೇ ಎಲ್ಲಾ ದೇವಸ್ಥಾಗಳ ಕಮಿಡಿಯವರಿಗೆ ಆದೇಶ ಸೂಚನೆ ನೀಡುವ ಕೆಲಸಕ್ಕೆ ಕೈ ಹಾಕಿದ್ದೇವೆ. ಇನ್ನು ಆರ್ಥಿಕ ಸಂಸ್ಥೆಯವರು ಮತ್ತು ಜ್ಯುವೆಲ್ಲರಿ ಅಂಗಡಿಯವರು ಕೂಡ ಸೂಕ್ತ ಎಚ್ಚರಿಕೆ ಕ್ರಮ ವಹಿಸಲು ಸೂಚಿಸಲಾಗಿದೆ. `ಸೇಫ್ ಕುಂದಾಪುರ ಪ್ರಾಜೆಕ್ಟ್’ ಅಡಿಯಲ್ಲಿ ಸಿಸಿ ಟಿವಿ ಅಳವಡಿಸಿಕೊಂಡು ಅದನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿದ್ದು ಅದನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ ಎಂದರು.