ಮಂಗಳೂರು: ತ್ರಿಶಾ ಕಾಲೇಜ್ ವಿದ್ಯಾರ್ಥಿಗಳಿಂದ ಹರ್ ಘರ್ ತಿರಂಗಾ ಅಭಿಯಾನ

ಮಂಗಳೂರು: ನಮ್ಮ ದೇಶ ಸ್ವತಂತ್ರಗೊಂಡು 75 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ‘ಹರ್ ಘರ್ ತಿರಂಗಾ’ ಅಭಿಯಾನವು ರಾಷ್ಟ್ರವ್ಯಾಪಿ ನಡೆಯುತ್ತಿದೆ.

ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಎಂಡ್ ಮ್ಯಾನೇಜ್ ಮೆಂಟ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜ್ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಈ ಅಭಿಯಾನವನ್ನು ಕೈಗೊಂಡರು.

ತ್ರಿಶಾ ಕಾಲೇಜಿನ ರೆಡ್ ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್ ನ ವಿದ್ಯಾರ್ಥಿಗಳು ಕುದ್ರೋಳಿ ಹಾಗೂ ಅಳಕೆಯ ಹಲವಾರು ಮನೆಗಳಿಗೆ ತೆರಳಿ ತ್ರಿವರ್ಣ ಧ್ವಜವನ್ನು ನೀಡುವ ಮೂಲಕ ತಮ್ಮ ನಿವಾಸಗಳಲ್ಲಿ ಆಗಸ್ಟ್ 13 ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಈ ಅಮೃತ ಮಹೋತ್ಸವದ ಮಹತ್ವವನ್ನು ಸಾರ್ವಜನಿಕರಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.

ಹರ್ ಘರ್ ತಿರಂಗಾ ಅಭಿಯಾನಕ್ಕೆ ಬೇಕಾದ ತ್ರಿವರ್ಣಧ್ವಜವನ್ನು ಡೊಂಗರಕೇರಿ 42ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಜಯಶ್ರೀ ಕುಡ್ವ ಅವರು ಕಾಲೇಜಿಗೆ ಒದಗಿಸಿದರು.

ಈ ಸಂದರ್ಭದಲ್ಲಿ ತ್ರಿಶಾ ಕಾಲೇಜಿನ ಪ್ರಾಂಶುಪಾಲ ಪ್ರೋ.ಗಿರೀಶ್ ಮಾಡ್ಲ, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುಪ್ರಭಾ, ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಪ್ರೊ.ಶಿಲ್ಪಶೆಟ್ಟಿ, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ.ಆಡ್ಲಿನ್ ಪಿಂಟೋ, ಪ್ರೊ.ಚಂದನ್ ಕುಮಾರ್ ಮತ್ತು ಕಾಲೇಜಿನ ರೆಡ್ ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್.ನ ಪದಾಧಿಕಾರಿಗಳು, ಸ್ವಯಂ ಸೇವಕರು ಭಾಗವಹಿಸಿದರು.