ಉತ್ತರ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಸಣ್ಣ ಪಟ್ಟಣವಾದ ವಡ್ನಗರದ ಪುಟ್ಟ ಊರಿನಲ್ಲಿ ನರೇಂದ್ರ ಮೋದಿಯವರ ಜೀವನದ ಪಯಣ ಪ್ರಾರಂಭವಾಯಿತು. ಸೆಪ್ಟೆಂಬರ್ 17, 1950 ರಂದು ದಾಮೋದರದಾಸ್ ಮೋದಿ ಮತ್ತು ಹೀರಾಬಾ ಮೋದಿಗೆ ಜನಿಸಿದ ಮೂರನೇ ಮಗುವಿಗೆ ನರೇಂದ್ರ ಎನ್ನುವ ಹೆಸರಿಡುತ್ತಾರೆ. ಅತ್ಯಂತ ಸಾಧಾರಣ ಕುಟುಂಬದಲ್ಲಿ ನರೇಂದ್ರ ಎನ್ನುವ ಬಾಲಕನ ಜನನ ಮತ್ತು ಪಾಲನೆಯಾಗುತ್ತದೆ. ಅವರ ಇಡೀ ಕುಟುಂಬವು ಸುಮಾರು 40 ಅಡಿ 12 ಅಡಿಗಳಷ್ಟು ಸಣ್ಣ ಒಂದೇ ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿತ್ತು. ಅಂದಿನಿಂದ ಇಂದಿನವರೆಗೂ ಅವರ ಪರಿವಾರ ಅತ್ಯಂತ ವಿನಮ್ರ ಮತ್ತು ಸಾಧಾರಣ ಬದುಕನ್ನು ಬದುಕುತ್ತಿದೆ.
ನರೇಂದ್ರ ಎನ್ನುವ ಹೆಸರಿಟ್ಟಿದ್ದೇ ಅನ್ವರ್ಥ ಎನ್ನುವಂತೆ ಅಧ್ಯಾತ್ಮದ ತುಡಿತದ ನರೇಂದ್ರ ಮೋದಿ 17 ನೇ ವಯಸ್ಸಿನಲ್ಲಿ ಮನೆ ತೊರೆದು ಅಧ್ಯಾತ್ಮದ ಹಾದಿಯಲ್ಲಿ ನಡೆದು ಬಿಡುತ್ತಾರೆ. ಸನ್ಯಾಸಿ ಜೀವನವನ್ನು ನಡೆಸುತ್ತಿದ್ದ ಮೋದಿಯವರು ತಮ್ಮ ಗುರುಗಳ ಪ್ರೇರಣೆಯಂತೆ ವಾಪಾಸು ಮನೆಗೆ ಬರುತ್ತಾರೆ ಮತ್ತು ಸಂಸಾರಿಕ ಬಂಧನದಲ್ಲಿದ್ದರೂ ಯೋಗಿಯ ಜೀವನವನ್ನು ನಡೆಸುತ್ತಾ ದೇಶ ಸೇವೆಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ. ದೇಶ ಸೇವೆಗೆಂದೇ ಮುಡುಪಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪರ್ಕಕ್ಕೆ ಬಂದ ಮೋದಿಯವರು ತುರ್ತುಪರಿಸ್ಥಿಯ ಸಂದರ್ಭದಲ್ಲಿ ಸಂಘದ ಸಂವಾಹಕರಾಗಿ ದುಡಿಯುತ್ತಾರೆ. 1980 ರ ದಶಕದಲ್ಲಿ ಸಂಘದೊಳಗೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಕುಶಲ ಸಂಘಟಕನಾಗಿ ಹೊರಹೊಮ್ಮುತ್ತಾರೆ.
1987 ರಲ್ಲಿ ಮೋದಿಯವರು ಗುಜರಾತ್ನಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಅವರ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ. ಮೊಟ್ಟಮೊದಲ ಬಾರಿಗೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ದೊರಕಿಸಿಕೊಡುತ್ತಾರೆ. 1990ರ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯು ಎರಡನೇ ಸ್ಥಾನ ಪಡೆಯುವುದನ್ನು ಖಚಿತಪಡಿಸುತ್ತಾರೆ. 1995 ರ ಅಸೆಂಬ್ಲಿ ಚುನಾವಣೆಯಲ್ಲಿ ಮೋದಿಯವರ ಸಂಘಟನಾ ಕೌಶಲ್ಯದಿಂದ ಬಿಜೆಪಿಯ ಮತಗಳ ಪ್ರಮಾಣ ಹೆಚ್ಚಿ ಪಕ್ಷವು 121 ಸ್ಥಾನಗಳನ್ನು ಗೆಲ್ಲುತ್ತದೆ.
1995 ರಿಂದ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಚಟುವಟಿಕೆಗಳನ್ನು ನೋಡಿಕೊಂಡ ಮೋದಿ, ಪ್ರಧಾನ ಕಾರ್ಯದರ್ಶಿಯಾಗಿ 1998 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಶ್ರಮಿಸುತ್ತಾರೆ. ಸೆಪ್ಟೆಂಬರ್ 2001 ರಲ್ಲಿ ಅಂದಿನ ಪ್ರಧಾನಿ ವಾಜಪೇಯಿಯವರಿಂದ ಬಂದ ಒಂದು ಕರೆ ಗುಜರಾತ್ ಮಾತ್ರವಲ್ಲ ಇಡೀ ದೇಶದ ಭವಿಷ್ಯವನ್ನೇ ಬದಲಾಯಿಸುತ್ತದೆ. ದೂರದರ್ಶಿ ವ್ಯಕ್ತಿತ್ವದ ಅಟಲ್ ಜೀ ಮೋದಿಯವರನ್ನು ಗುಜರಾತಿನ ಮುಖ್ಯಮಂತ್ರಿಯಾಗಿ ನೇಮಿಸುತ್ತಾರೆ.
2001 ರಿಂದ 2014 ರವರೆಗೆ ಗುಜರಾತಿನ ಮುಖ್ಯಮಂತ್ರಿ ಹಾಗೂ 2014 ರಿಂದ ಇಂದಿನವರೆಗೆ ಭಾರತ ಪ್ರಧಾನಿಯಾಗಿ ಸುದೀರ್ಘ 22 ವರ್ಷಗಳ ಅವಧಿಯಲ್ಲಿ ಒಂದು ದಿನವೂ ರಜೆಯನ್ನು ತೆಗೆದುಕೊಳ್ಳದ 72 ರ ಇಳಿವಯಸ್ಸಿನಲ್ಲಿಯೂ 27ರ ಯುವಕನಂತೆ ದಿನದ ಇಪ್ಪತ್ತನಾಲ್ಕು ಗಂಟೆಯೂ ದುಡಿಯುವ ಮೋದಿ ಎನ್ನುವ ವ್ಯಕ್ತಿ ‘ಇಚ್ಛಾಶಕ್ತಿ’ಗೆ ಪರ್ಯಾಯ ಹೆಸರೆಂದೇ ಭಾಸವಾಗುತ್ತದೆ. ಮನುಷ್ಯನಲ್ಲಿ ಇಚ್ಛಾಶಕ್ತಿಯೊಂದಿದ್ದರೆ ಆತ ಏನು ಬೇಕಾದರೂ ಸಾಧಿಸಬಲ್ಲ ಎನ್ನುವುದನ್ನು ಮೋದಿಯವರು ಸಾಧಿಸಿ ತೋರಿಸಿದ್ದಾರೆ.
ಅಸಾಧ್ಯವನ್ನು ಸಾಧ್ಯವಾಗಿಸುವ ಅದಮ್ಯ ಉತ್ಸಾಹದ ಚಿಲುಮೆ, ಇಂದಿಗೂ ತಳಮಟ್ಟದ ಕಾರ್ಯಕರ್ತನೆಂದು ಗುರುತಿಸಿಕೊಳ್ಳುವ ಸಂಘಟಕ, ಅಭಾವಗಳ ಮಧ್ಯೆಯೂ ಅವಕಾಶಗಳನ್ನು ಹುಡುಕುವ ನರೇಂದ್ರ ಮೋದಿಯವರು ಕೇವಲ ಭಾರತದ ನಾಯಕ ಮಾತ್ರವಲ್ಲ ವಿಶ್ವ ನಾಯಕನಾಗಿಯೂ ಹೊರಹೊಮ್ಮಿದ್ದಾರೆ. ಅಂದು ನರೇಂದ್ರನಾಥ ದತ್ತರು ವಿವೇಕಾನಂದರಾಗಿ ಭಾರತವನ್ನು ವಿಶ್ವಗುರುವನ್ನಾಗಿಸುವ ಕನಸು ಕಂಡರೆ ಇಂದು ನರೇಂದ್ರ ದಾಮೋದರ್ ಮೋದಿ ಆ ಕನಸನ್ನು ನನಸಾಗಿಸುವ ಪಣತೊಟ್ಟಿದ್ದಾರೆ.
ಗಂಭೀರವಾದ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಧೈರ್ಯ, ದೃಢತೆ ಮತ್ತು ಬಲವಾದ ನಾಯಕತ್ವ ಹಾಗೂ ಎಡೆಬಿಡದ ಪರಿಶ್ರಮದಿಂದ ಮುನ್ನುಗ್ಗುತ್ತಾ ಭಾರತವನ್ನು ವಿಶ್ವಗುರುವಾಗಿಸುವ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕುತ್ತಿರುವ ವಿಶ್ವನಾಯಕ ನರೇಂದ್ರ ಮೋದಿಯವರಿಗೆ ಜನುಮ ದಿನದ ಶುಭಾಶಯಗಳು..