ಜಗತ್ತಿಗೆ ಗುರುವಾದ ಜಗದೊಡೆಯನ ಜನುಮ ದಿನದ ಶುಭಾಶಯಗಳು

ಈ ಜಗತ್ತಿನಲ್ಲಿ ಕೃಷ್ಣ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವ ಸ್ಥಳಗಳು, ಮೊದಲನೆಯದ್ದು ಮಥುರಾ, ಎರಡನೆಯದ್ದು ದ್ವಾರಕ, ಮೂರನೆಯದ್ದು ನಮ್ಮ ತುಳುನಾಡಿನ ಒಡಿಪು(ಉಡುಪಿ). ಗೋಕುಲ- ಮಥುರಾದಲ್ಲಿ ಹುಟ್ಟಿ ಬೆಳೆದ ಕೃಷ್ಣ ಮುಂದೆ ದ್ವಾರಕೆಯನ್ನು ತನ್ನ ಕರ್ಮ ಭೂಮಿಯನ್ನಾಗಿಸಿದ. ಮಥುರಾದ ಜನ್ಮ ಭೂಮಿಯಿಂದ, ದ್ವಾರಕೆಯ ಕರ್ಮ ಭೂಮಿಗೆ ಅವಿನಾಭಾವ ಸಂಬಂಧ. ಅಂತೆಯೆ ನಮ್ಮ ಒಡಿಪು ಅಂದರೆ ಕೃಷ್ಣ, ಕೃಷ್ಣ ಅಂದರೆ ಒಡಿಪು!

ಕಲಿಯುಗ ವ್ಯಾಸರೆಂದೆ ಖ್ಯಾತಿವೆತ್ತ ಮಧ್ವಾಚಾರ್ಯರ ದಯದಿಂದ, ಬಹುಶಃ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನ ಕೃಪೆಯಿಂದ ಇಂದಿನ ಉಡುಪಿಗೂ ಕೃಷ್ಣನ ನಂಟಿನ ಭಾಗ್ಯ ದೊರೆಯಿತು. ಜಗತ್ತಿಗೆ ಗುರುವಾದ ಜಗದೊಡೆಯನ ಕೃಪೆ ಇರುವ ಉಡುಪಿಯಲ್ಲಿರುವುದು ನಮ್ಮೆಲ್ಲರ ಭಾಗ್ಯವೆ ಸರಿ. ತುಳುವ ಆಡು ಭಾಷೆಯಲ್ಲಿ ಕಿಟ್ಟೆ, ಕಿಟ್ಟಪ್ಪ ಎನಿಸಿಕೊಳ್ಳುವ ಕೃಷ್ಣ ಜನ್ಮಾಷ್ಟಮಿಯಂದು ಇಡಿಯ ತುಳುನಾಡಿನಲ್ಲೇ ಸಂಭಮ.

ಅಪ್ಪಟ ತುಳುನಾಡಿನ ತಿನಿಸುಗಳಾದ ಗುಂಡ, ಕೊಟ್ಟಿಗೆ, ಮೂಡೆ, ಸೇಮೆದಡ್ಡೆ(ಶ್ಯಾವಿಗೆ), ಇದಕ್ಕೆ ಜೊತೆಗೆ ನೆಚ್ಚಿಕೊಳ್ಳಲು ತೆಂಗಿನ ಕಾಯಿ-ಬೆಲ್ಲ ಮತ್ತು ಬಾಳೆಹಣ್ಣಿನ ಹಾಲು, ಹೆಸರಿನ ಪಲ್ಯ ಆಹಾ….. ಬಾಯಲ್ಲಿ ನೀರೂರಿಸುತ್ತವೆ. ಅಟ್ಟೆಮಿಯ ಮರುದಿನ ಕೋಳಿ-ಮೀನಿನ ಸಾರು, ಇದೆಲ್ಲಾ ಕೃಷ್ಣ ಜನ್ಮಾಷ್ಟಮಿಯಂದು ಪ್ರತಿ ಮನೆಯಲ್ಲೂ ಕಾಣ ಸಿಗುತ್ತವೆ.

ಅವಿಭಜಿತ ದ.ಕ ಜಿಲ್ಲೆಯ ಬೀದಿಬೀದಿಯಲ್ಲಿ ತರಹೇವಾರಿ ವೇಷಗಳು, ಪಿಲಿ ನಲಿಕೆ(ಹುಲಿಕುಣಿತ), ಮೊಸರು ಕುಡಿಕೆಯ ಸಂಭ್ರಮ. ಎಲ್ಲಿ ನೋಡಿದರಲ್ಲಿ ಮುದ್ದು ಕೃಷ್ಣ, ತಾಯಿ ಯಶೋದೆಯರ ಸಡಗರ. ಇವೆಲ್ಲವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಧರ್ಮ ಸಂಸ್ಥಾಪನೆಗೆಂದೆ ಹುಟ್ಟಿದ ಕೃಷ್ಣ, ಗೀತಾಮೃತವನ್ನು ಬೋಧಿಸಿ, ಭರತಖಂಡದಲ್ಲೆಲ್ಲಾ ಧರ್ಮವನ್ನು ಪ್ರತಿಷ್ಠಾಪಿಸಿ ಜಗದ್ಗುರು ಎನಿಸಿಕೊಂಡ. ಕೃಷ್ಣನಂತಹ ಉಜ್ವಲ ವ್ಯಕ್ತಿತ್ವದ ವ್ಯಕ್ತಿ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಕೃಷ್ಣ ಹುಟ್ಟಿದ, ಆಡಿ ಕುಣಿದು ಬೆಳೆದ ಈ ಮಣ್ಣಿನಲ್ಲಿ ನಾವು ಹುಟ್ಟಿರುವುದು ನಮ್ಮೆಲ್ಲರ ಭಾಗ್ಯ.

ಜಗತ್ತಿಗೆ ಗುರುವಾದ ಜಗದೊಡೆಯನ ಜನುಮದಿನದ ಶುಭಾಶಯಗಳೊಂದಿಗೆ… ಸರ್ವರ ಮೇಲೂ ಶ್ರೀ ಕೃಷ್ಣನ ಕೃಪೆ ಇರಲಿ ಎಂದು ಆಶಿಸುತ್ತೇವೆ.

– ಉಡುಪಿ ಎಕ್ಸ್ ಪ್ರೆಸ್