ರಾಯಚೂರು: ವಿಶ್ವ ವಿಖ್ಯಾತ ಹಂಪಿ ಉತ್ಸವ ಫೆಬ್ರವರಿ 2 ರಿಂದ ಪ್ರಾರಂಭವಾಗಲಿದ್ದು ಉತ್ಸವ ಆರಂಭಕ್ಕೂ ಮುನ್ನಾ ದಿನ ಫೆ.1ರಂದು ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್ ಯಾನ ಆರಂಭವಾಗಲಿದೆ.
ಫೆಬ್ರವರಿ 1 ರಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್ ಯಾನಕ್ಕೆ ಚಾಲನೆ ನೀಡಲಿದ್ದಾರೆ. ಇದು ವಿಶ್ವ ಪಾರಂಪರಿಕ ತಾಣದ ಪಕ್ಷಿನೋಟಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಹೆಲಿಕಾಪ್ಟರ್ ಯಾನವನ್ನು ಉತ್ಸವ ದಿನದಂದೇ ಆರಂಭಿಸಲಾಗುತ್ತಿತ್ತು. ಆದರೆ, ಹಲವು ಪ್ರವಾಸಿಕರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ಹೀಗಾಗಿ ಮುನ್ನಾ ದಿನವೇ ಆರಂಭಿಸಲಾಗುತ್ತಿದೆ. ಅಲ್ಲದೆ, ಹೆಲಿಕಾಪ್ಟರ್ ಯಾನದ ಅವಧಿಯನ್ನೂ ಕೂಡ 6 ನಿಮಿಷಗಳಿಂದ 8 ನಿಮಿಷಕ್ಕೆ ಹೆಚ್ಚಿಸಲಾಗಿದೆ.
ಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಿಂದ ಬೆಳಿಗ್ಗೆ 10ಕ್ಕೆ ಹಂಪಿ ಬೈ ಸ್ಕೈ ಹೆಲಿಕಾಪ್ಟರ್ ಯಾನ ಆರಂಭವಾಗಲಿದೆ. ಜನರನ್ನು ಏಳು ನಿಮಿಷ ಆಗಸದಲ್ಲಿ ಹೆಲಿಕಾಪ್ಟರ್ನಲ್ಲಿ ಸುತ್ತಾಡಿಸಿ ವಾಪಸ್ ಕರೆತರಲಾಗುವುದು. ಮೂರೂ ದಿನ ಈ ವ್ಯವಸ್ಥೆ ಇರಲಿದೆ. ಹಂಪಿಯ ವೈಮಾನಿಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಹಾಗೂ ಆಸಕ್ತರಿಗೆ ಅವಕಾಶ ಲಭಿಸಲಿದೆ. ಎಂಟು ನಿಮಿಷಗಳ ಯಾನಕ್ಕೆ 4,299 ರೂ. ಮತ್ತು ಏಳು ನಿಮಿಷಕ್ಕೆ 3,700 ರೂ. ಎರಡು ವರ್ಷದೊಳಗಿನ ಮಕ್ಕಳಿಗೆ ಉಚಿತ ಯಾನ. ಯಾನಕ್ಕೆ ಬರುವ ಪ್ರವಾಸಿಗರು ಯಾವುದಾದರೂ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾಹಿತಿ ನೀಡಿದ್ದಾರೆ