ಹಮಾಸ್ ನ ಭದ್ರಕೋಟೆಗಳನ್ನು ಸುತ್ತುವರಿದ ಇಸ್ರೇಲ್: ಕದನ ಅಂತಿಮ ಹಂತಕ್ಕೆ; ತುರ್ತು ಸಭೆ ಕರೆದ ವಿಶ್ವಸಂಸ್ಥೆ

ಟೆಲ್ ಅವೀವ್: ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಉತ್ತರ ಗಾಜಾದಲ್ಲಿ ಪ್ಯಾಲೆಸ್ತೀನ್ ಬೆಂಬಲಿತ ಹಮಾಸ್‌ ಉಗ್ರಗಾಮಿಗಳನ್ನು ಮಟ್ಟ ಹಾಕುವ ಕಾರ್ಯ ತನ್ನ ಅಂತಿಮ ಘಟ್ಟದಲ್ಲಿದೆ ಎಂದು ಹೇಳಿದ್ದಾರೆ. ಜಬಲಿಯಾ ಮತ್ತು ಶೆಜೈಯಾ ಬೆಟಾಲಿಯನ್‌ ನ ಹಮಾಸ್ ಸದಸ್ಯರು ಶರಣಾಗುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

“ನಾವು ಜಬಾಲಿಯಾ ಮತ್ತು ಶೆಜೈಯಾದಲ್ಲಿನ ಹಮಾಸ್‌ನ ಅಂತಿಮ ಭದ್ರಕೋಟೆಗಳನ್ನು ಸುತ್ತುವರೆದಿದ್ದೇವೆ, ಅಜೇಯವೆಂದು ಪರಿಗಣಿಸಲ್ಪಟ್ಟ ಬೆಟಾಲಿಯನ್‌ಗಳು, ನಮ್ಮೊಂದಿಗೆ ಹೋರಾಡಲು ವರ್ಷಗಳ ಕಾಲದಿಂದ ಸಿದ್ಧತೆ ನಡೆಸಿವೆ, ಈಗ ಅವು ಕಿತ್ತುಹಾಕಲ್ಪಡುವ ಅಂಚಿನಲ್ಲಿದೆ,” ಎಂದು ಗ್ಯಾಲಂಟ್ ಹೆಳಿಕೆಯನ್ನು ದಿ ಟೈಮ್ಸ್ ಆಫ್ ಇಸ್ರೇಲ್ ಉಲ್ಲೇಖಿಸಿದೆ.

ಗಾಜಾದ ಹಮಾಸ್ ಆಡಳಿತಗಾರರನ್ನು ಸೋಲಿಸಲು ತಿಂಗಳುಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಹೋರಾಡಲು ಇಸ್ರೇಲಿ ಸೇನೆಯು ತನ್ನ ಸನ್ನದ್ಧತೆಯನ್ನು ಪುನರುಚ್ಚರಿಸಿದೆ. ಜೊತೆಗೆ ಗಾಜಾ ಪಟ್ಟಿಗೆ ಪ್ರವೇಶಿಸುವ ಸರಕುಗಳನ್ನು ಪರಿಶೀಲಿಸಲು ಎರಡನೇ ಕ್ರಾಸಿಂಗ್ ಅನ್ನು ತೆರೆಯುವುದಾಗಿ ಇಸ್ರೇಲ್ ಘೋಷಿಸಿದೆ, ಇದು ಮುತ್ತಿಗೆ ಹಾಕಿದ ಪ್ರದೇಶಕ್ಕೆ ಮಾನವೀಯ ನೆರವಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಗಾಜಾಕ್ಕೆ ಹೋಗುವ ಸರಕುಗಳ ತಪಾಸಣೆಗಾಗಿ ಕೆರೆಮ್ ಶಾಲೋಮ್ ಕ್ರಾಸಿಂಗ್ ಮಂಗಳವಾರ ತೆರೆಯಲಿದೆ ಎಂದು ಇಸ್ರೇಲಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ಇಸ್ರೇಲ್‌ನ ನಿಟ್ಜಾನಾ ಕ್ರಾಸಿಂಗ್ ಕಾರ್ಯಾಚರಣೆಯಲ್ಲಿರುವ ಏಕೈಕ ತಪಾಸಣೆ ಕೇಂದ್ರವಾಗಿದೆ.

ಏತನ್ಮಧ್ಯೆ, ಮಂಗಳವಾರ (ನ್ಯೂಯಾರ್ಕ್ ಸ್ಥಳೀಯ ಸಮಯ), ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಗಾಜಾದಲ್ಲಿ ತಕ್ಷಣದ ಮಾನವೀಯ ಕದನ ವಿರಾಮವನ್ನು ಒತ್ತಾಯಿಸುವ ಕರಡು ನಿರ್ಣಯದ ಮೇಲೆ ಮತ ಚಲಾಯಿಸಲಿದೆ. ಸಭೆಯನ್ನು 22 ಸದಸ್ಯರ ಅರಬ್ ಗುಂಪು ಮತ್ತು 57 ಸದಸ್ಯರ ಇಸ್ಲಾಮಿಕ್ ಸಹಕಾರ ಸಂಘಟನೆಯು ವಿನಂತಿಸಿದೆ ಎಂದು ಅಸೆಂಬ್ಲಿ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರ ಪತ್ರದಲ್ಲಿ ತಿಳಿಸಲಾಗಿದೆ.