ಹಲ್ಲೆ ಆರೋಪಿ‌ ಯೋಗೀಶ್ ಸಾಲ್ಯಾನ್ ಬಿಜೆಪಿಯಿಂದ ಅಮಾನತು

ಉಡುಪಿ: ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಆರೋಪಿ ಬಿಜೆಪಿ ಪಕ್ಷದ, ವಡಾಭಾಂಡೇಶ್ವರ ನಗರಸಭಾ ಸದಸ್ಯ ಯೊಗೀಶ್ ಸಾಲ್ಯಾನ್ ಅವರನ್ನು ಮಂಗಳವಾರ ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ.
ಘಟನೆಯ ಕುರಿತು ಖಂಡನೆ ವ್ಯಕ್ತಪಡಿಸಿದ್ದ ಬಿಜೆಪಿ‌ ಜಿಲ್ಲಾಧ್ಯಕ್ಷ ಮಟ್ಟಾರು‌ ರತ್ನಾಕರ ಹೆಗ್ಡೆ ಅವರು, ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಕ್ರಮ ಖಂಡನೀಯ. ಬಿಜೆಪಿ ಪಕ್ಷ ಇಂಥ ವಿಚಾರ ಸಹಿಸುವುದಿಲ್ಲ. ಆರೋಪಿತರ ವಿರುದ್ದ ಪಕ್ಷದ ವತಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದರು.
ಘಟನೆ ಹಿನ್ನೆಲೆ:
ಮಂಗಳವಾರ ಉಡುಪಿ ನಗರಸಭೆ ಬಿಜೆಪಿ ಬೆಂಬಲಿತ ಸದಸ್ಯ ನಗರಸಭೆ ಆರೋಗ್ಯ ನಿರೀಕ್ಷಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದ ಆರೋಗ್ಯ ನಿರೀಕ್ಷಕ, ಚಿಕ್ಕಮಗಳೂರು ಜಿಲ್ಲೆ, ತರಿಕೆರೆ, ಅತ್ತಿಮೊಗ್ಗೆ ನಿವಾಸಿ ಎ.ಜೆ ಪ್ರಸನ್ನ ಕುಮಾರ್ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ವಿಷಯ ತಿಳಿದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಸ್ಪತ್ರೆ ಬಳಿ ಜಮಾಯಿಸಿದ್ದರು.
ಆರೋಪಿ, ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್ ಮಂಗಳವಾರ ಬೆಳಗ್ಗೆ ನಗರಸಭೆ ಕಚೇರಿಯಲ್ಲಿದ್ದ ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್‌ಗೆ  ಕರೆ ಮಾಡಿ ಒಳಚರಂಡಿ ವಿಚಾರಕ್ಕೆ ಸಂಬಂಧಿಸಿ ಏರುಧ್ವನಿಯಲ್ಲಿ ಬೈದಿದ್ದಾನೆ. ಬಳಿಕ ಏಕಾಏಕಿ ಕಚೇರಿಗೆ ಬಂದು, ಕೈ ಮುಷ್ಠಿಯಿಂದ ಬಲಕಣ್ಣಿಗೆ  ಹೊಡೆದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಪ್ರಸನ್ನ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಡಭಾಂಡೇಶ್ವರ ವಾರ್ಡ್‌ನ ಒಳಚರಂಡಿಯ ಸ್ಲಾಬ್‌ನ್ನು ತೆಗೆದು ದುರಸ್ತಿಗೊಳಿಸುವಂತೆ ಯೋಗೀಶ್ ಸಾಲ್ಯಾನ್ ಹಲವು ಭಾರಿ ಸೂಚಿಸಿದ್ದರು ಎನ್ನಲಾಗಿದೆ. ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಈ ಕೆಲಸ ವಿಳಂಬವಾಗಿದೆ. ಇದೇ ವಿಚಾರದಲ್ಲಿ ಅಧಿಕಾರಿಗೆ ಬೈದು, ಹಲ್ಲೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಕ್ರಮಕ್ಕೆ ಡಿಸಿ, ಎಸ್‌ಪಿಗೆ ಕಾಂಗ್ರೆಸ್ ಮನವಿ :
ಘಟನೆಗೆ ಸಂಬಂದಿಸಿದಂತೆ ಖಂಡನೆ ವ್ಯಕ್ತಪಡಿಸಿದ ಕಾಂಗ್ರೆಸ್ , ಯೋಗೀಶ್ ಸಾಲ್ಯಾನ್ ಮೇಲೆ ಕಠಿಣ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅವರಿಗೆ ಮನವಿ ಸಲ್ಲಿಸಿದೆ.