ನಾಡದೋಣಿ ಮೀನುಗಾರರ ವಿವಿಧ ಬೇಡಿಕೆ ಈಡೇರಿಕೆಗಾಗಿ ಹಕ್ಕೊತ್ತಾಯ ಪಾದಯಾತ್ರೆ

ಉಡುಪಿ: ನಾಡದೋಣಿ ಮೀನುಗಾರರಿಗೆ ಸೀಮೆ ಎಣ್ಣೆ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 3ರಂದು ಬೈಂದೂರು ಹಾಗೂ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದಿಂದ ಹಕ್ಕೊತ್ತಾಯ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬೈಂದೂರು ನಾಡದೋಣಿ ಸಂಘದ ಅಧ್ಯಕ್ಷ ಆನಂದ ಕಾರ್ವಿ ಉಪ್ಪುಂದ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಎಂಜಿಎಂ ಕಾಲೇಜಿನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಹಕ್ಕೊತ್ತಾಯ ಪಾದಯಾತ್ರೆ ನಡೆಸಲಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ಮೀನುಗಾರರು ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದರು.

ರಾಜ್ಯ ಸರ್ಕಾರದ ಆದೇಶದಂತೆ ನಾಡದೋಣಿ ಮೀನುಗಾರರಿಗೆ ಆಗಸ್ಟ್ ತಿಂಗಳಿನಿಂದ ಸೀಮೆ ಎಣ್ಣೆ ಬಿಡುಗಡೆಯಾಗಬೇಕಿತ್ತು. ನವೆಂಬರ್ 2ರಂದು 3,000 ಲೀಟರ್ ಸೀಮೆಎಣ್ಣೆ ಕೇಂದ್ರದಿಂದ

ಬಿಡುಗಡೆಯಾಗಿದ್ದು, ಈವರೆಗೂ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಸಮರ್ಪಕವಾಗಿ ಸಿಕ್ಕಿಲ್ಲ. ಇದರಿಂದ ಮೀನುಗಾರಿಕೆ ಸ್ಥಗಿತಗೊಂಡು ನಾಡದೋಣಿ ಮೀನುಗಾರರು ಕುಟುಂಬ ನಿರ್ವಹಣೆ ಮಾಡಲು ಕಷ್ಟಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ವಿಳಂಬ ಧೋರಣೆಯಿಂದ ಮೀನುಗಾರಿಕೆಗೆ ಕಷ್ಟವಾಗುತ್ತಿದೆ. ಬಿಡುಗಡೆಯಾದ ಮೂರು ಸಾವಿರ ಲೀಟರ್ ಸೀಮೆಎಣ್ಣೆಯನ್ನು ನಾಡದೋಣಿ ಮೀನುಗಾರರಿಗೆ ತಲುಪಿಸಬೇಕು. ಕೇಂದ್ರ ಸರ್ಕಾರ ಸೀಮೆ ಎಣ್ಣೆ ಬಿಡುಗಡೆ ಮಾಡದೇ ಹೋದರೂ, ರಾಜ್ಯ ಸರ್ಕಾರವೇ ಮುಂದೆ ಬಂದು ಬಿಳಿ ಸೀಮೆಎಣ್ಣೆಯನ್ನು ಖರೀದಿಸಬೇಕು. ಆ ಮೂಲಕ ನಾಡದೋಣಿ ಮೀನುಗಾರರಿಗೆ ಸಹಾಯ ಮಾಡಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ನಾಡದೋಣಿ ಸಂಘದ ಗೌರವಾಧ್ಯಕ್ಷ ನವೀನ್‌ಚಂದ್ರ ಉಪ್ಪುಂದ, ಸಂಘದ ಉಪಾಧ್ಯಕ್ಷ ರಾಮ ಕಾರ್ವಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಾರ್ವಿ, ಉಪಾಧ್ಯಕ್ಷ ಭಾಸ್ಕರ ಕಾರ್ವಿ ಉಪಸ್ಥಿತರಿದ್ದರು.