ಹಫೀಜ್ ಸಯೀದ್‌ ನ ಆಪ್ತ ಹಂಝ್ಲಾ ಅದ್ನಾನ್ ಅಜ್ಞಾತ ಬಂದೂಕುಧಾರಿಗಳ ಗುಂಡಿಗೆ ಬಲಿ

ಕರಾಚಿ: ಡಿಸೆಂಬರ್ 2 ಮತ್ತು 3 ರ ಮಧ್ಯರಾತ್ರಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಹಂಝ್ಲಾ ಅದ್ನಾನ್ ನನ್ನು ಪಾಕಿಸ್ತಾನದ ಕರಾಚಿಯಲ್ಲಿರುವ ಆತನ ನಿವಾಸದ ಬಳಿ ಅಜ್ಞಾತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ನಂತರ ಆತನನ್ನು ಪಾಕಿಸ್ತಾನದ ಸೇನೆಯು ಕರಾಚಿಯ ಆಸ್ಪತ್ರೆಗೆ ಕರೆದೊಯ್ದಿದ್ದು, ಮಂಗಳವಾರ (ಡಿಸೆಂಬರ್ 5) ದಂದು ಆತ ನಿಧನನಾಗಿದ್ದಾನೆ ಎಂದು ವರದಿಯಾಗಿದೆ.

ಅದ್ನಾನ್ ಅಹ್ಮದ್ ಅಲಿಯಾಸ್ ಹಂಝ್ಲಾ ಅದ್ನಾನ್ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್‌ಗೆ ಅತ್ಯಂತ ಆಪ್ತನಾಗಿದ್ದ. ಡಿಸೆಂಬರ್ 2 ರ ರಾತ್ರಿ, ಅಜ್ಞಾತ ಬಂಧೂಕುದಾರಿಗಳು ದಾಳಿ ನಡೆಸಿದ್ದಾರೆ. ಹಂಝ್ಲಾ ಅದ್ನಾನ್ ಗೆ 4 ಗುಂಡುಗಳು ತಗಲಿವೆ. ಅದ್ನಾನ್ ಅವರ ಸುರಕ್ಷಿತ ಮನೆಯ ಹೊರಗೆ ಬಿಗಿ ಭದ್ರತೆಯ ನಡುವೆಯೂ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ಸೇನೆಯು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಡಿ.5 ರಂದು ಆತ ಕೊನೆಯುಸಿರೆಳಿದಿದ್ದಾನೆ.

ಇದು ಹಫೀಜ್ ಸಯೀದ್‌ಗೆ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಹಂಝ್ಲಾ ಅದ್ನಾನ್ ಇತ್ತೀಚೆಗೆ ರಾವಲ್ಪಿಂಡಿಯಿಂದ ಕರಾಚಿಗೆ ಕಾರ್ಯಾಚರಣೆಯ ನೆಲೆಯನ್ನು ಬದಲಾಯಿಸಿದ್ದನು.

2015 ರ ಉಧಮ್‌ಪುರ ದಾಳಿಯಲ್ಲಿ ಬಿ.ಎಸ್.ಎಫ್ (ಗಡಿ ಭದ್ರತಾ ಪಡೆ) ಬೆಂಗಾವಲು ಪಡೆಗಳ ಮೇಲೆ ಎಲ್‌ಇಟಿ ಭಯೋತ್ಪಾದಕ ದಾಳಿ ಹಾಗೂ 2016ರ ಪಾಂಪೋರ್‌ನಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ದಾಳಿಯ ಮಾಸ್ಟರ್ ಮೈಂಡ್ ಹಂಝ್ಲಾ ಅದ್ನಾನ್ ಪಾಕಿಸ್ತಾನದಲ್ಲಿ ಕುಳಿತು ಭಾರತದ ಮೇಲೆ ದಾಳಿ ನಡೆಸುತ್ತಿದ್ದನು. ವಿಶೇಷವಾಗಿ ಭಾರತದೊಳಗೆ ನುಸುಳಲು ಮತ್ತು ಭಯೋತ್ಪಾದಕ ದಾಳಿಗಳನ್ನು ನಡೆಸಲು ಭಯೋತ್ಪಾದಕರಿಗೆ ತರಬೇತಿ ನೀಡಲು ಐಎಸ್ಐ ಮತ್ತು ಪಾಕಿಸ್ತಾನಿ ಸೇನೆಯು ಹಂಝ್ಲಾ ಅದ್ನಾನ್ ನನ್ನು ನಿಯೋಜಿಸಿತ್ತು ಎನ್ನಲಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ, ಪಾಕಿಸ್ತಾನದಲ್ಲಿ ಅಜ್ಞಾತ ಬಂದೂಕುಧಾರಿಗಳು ಹಠಾತ್ ದಾಳಿಯಲ್ಲಿ ಭಯೋತ್ಪಾದಕರನ್ನು ಕೊಂದ ಅನೇಕ ಘಟನೆಗಳು ನಡೆದಿವೆ. ಇಂತಹ ದಾಳಿಗಳಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳ ಅನೇಕ ಭಯೋತ್ಪಾದಕರು ಹತರಾಗಿದ್ದಾರೆ.