ಉಡುಪಿ, ಮೇ 18: ಹೆಚ್1ಎನ್1 ಕಾಯಿಲೆಯು ಹೆಚ್1ಎನ್1 ಎಂಬ ಇನ್ಫ್ಲುಯೆಂಜಾ ಜಾತಿಗೆ ಸೇರಿದ ವೈರಾಣುವಿನಿಂದ ಬರುವಂತಹ ಕಾಯಿಲೆಯಾಗಿದೆ. ಇದು ಹೆಚ್ಚಿನ ಜನರಲ್ಲಿ ಮಾಮೂಲಿ ಶೀತ, ಕೆಮ್ಮು ರೂಪದಲ್ಲಿ ಬಂದು ಹೋಗುತ್ತದೆ. ಈ ಕಾಯಿಲೆಯಿಂದ ಸಾವಿರದಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಸಾವಿಗೀಡಾಗಬಹುದು.
ಈ ರೋಗವಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅವನ ಬಾಯಿ, ಮೂಗಿನಿಂದ ಲಕ್ಷಾಂತರ ರೋಗಾಣುಗಳು 5 ರಿಂದ 10 ಫೀಟ್ ತನಕ ಗಾಳಿಯಲ್ಲಿ ಹರಡುತ್ತದೆ. ಅವನ ಹತ್ತಿರ ಇರುವ ಆರೋಗ್ಯವಂತರ ಮೂಗಿಗೆ, ಬಾಯಿಗೆ ಪ್ರವೇಶಿಸಿದಾಗ ರೋಗ ಬರುವ ಸಾಧ್ಯತೆ ಇರುತ್ತದೆ. ಹಾಗೆಯೇ ಈ ರೋಗಾಣು ಪರಿಸರದಲ್ಲಿ (ಉದಾ: ಕುರ್ಚಿ, ಮೇಜು, ಬಸ್ಸಿನ ಸೀಟುಗಳು) ಕೆಲವು ಗಂಟೆಗಳ ಕಾಲ ಜೀವಂತ ಇರುತ್ತದೆ. ಅಂತಹ ಸ್ಥಳಗಳನ್ನು ಮುಟ್ಟಿ ಅದೇ ಕೈಯಲ್ಲಿ ನಾವು ಬಾಯಿ, ಮೂಗು, ಕಣ್ಣು ಮುಟ್ಟಿಕೊಂಡಲ್ಲಿ ರೋಗ ಬರುವ ಸಾಧ್ಯತೆ ಇರುತ್ತದೆ.
ಹೆಚ್1ಎನ್1 ಲಕ್ಷಣಗಳು:
ವಿಪರೀತ ಜ್ವರ, ಕೆಮ್ಮು, ವಿಪರೀತ ಸುಸ್ತು, ಗಂಟಲು ನೋವು, ವಿಪರೀತ ತಲೆ ನೋವು, ವಿಪರೀತ ಮೈಕೈ ನೋವು, ಸೀನು, ಮೂಗಿನಿಂದ ನೀರು ಬರುವುದು ಈ ರೋಗದ ಲಕ್ಷಣಗಳಾಗಿರುತ್ತದೆ.
ಮುಂಜಾಗೃತ ಕ್ರಮಗಳು:
ಕೈಯನ್ನು ಯಾವುದೇ ಕಾರಣಕ್ಕೂ ತೊಳೆಯದೇ ಮುಖದ ಯಾವುದೇ ಭಾಗವನ್ನು ಮುಟ್ಟಬಾರದು. ರೋಗ ಇರುವವರೊಂದಿಗೆ ಆದಷ್ಟು ಕಡಿಮೆ ಓಡಾಟ ನಡೆಸಬೇಕು. ಸಂದರ್ಭ ಸಿಕ್ಕಾಗಲೆಲ್ಲ ಸಾಬೂನು ಉಪಯೋಗಿಸಿ ಕೈ ತೊಳೆದುಕೊಳ್ಳಬೇಕು. ಹಸ್ತಲಾಗವ- ಆಲಿಂಗನವನ್ನು ಮಾಡಿಕೊಳ್ಳಬಾರದು. ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಕರವಸ್ತ್ರಗಳನ್ನು ಉಪಯೋಗಿಸಬೇಕು. ರೋಗದ ಲಕ್ಷಣ ಇರುವವರು ಶಾಲೆ, ಆಫೀಸಿಗೆ ಹೊಗದೇ ರಜೆ ಮಾಡಬೇಕು. ಶೀತ, ಕೆಮ್ಮು ಇರುವವರು ಸಾರ್ವಜನಿಕ ಸ್ಥಳಗಳಿಗೆ ಹೋಗಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.
ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ತೀವ್ರತರದ ಕಾಯಿಲೆ ಇರುವವರಲ್ಲಿ ಹೆಚ್1ಎನ್1 ಗಂಡಾಂತರಕಾರಿಯಾಗಿದ್ದು, ಅವರಲ್ಲಿ ಕೆಮ್ಮು, ನೆಗಡಿ, ತಲೆನೋವು, ಗಂಟಲು ಕೆರೆತ ಕಂಡುಬಂದರೆ, ಚಿಕಿತ್ಸೆ ನೀಡಿದರೂ 24 ಗಂಟೆಯೊಳಗೆ ಗುಣವಾಗದಿದ್ದಲ್ಲಿ ಅವರನ್ನು ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು.
ಜಿಲ್ಲೆಯಲ್ಲಿ ಹೆಚ್1ಎನ್1 ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳು:
ಸರಕಾರಿ ವೈದ್ಯಾಧಿಕಾರಿಯವರು, ಖಾಸಗಿ ವೈದ್ಯರು ಮತ್ತು ಆಯುಷ್ ವೈದ್ಯರುಗಳಿಗೆ ಹೆಚ್1ಎನ್1 ಕುರಿತು ಅರಿವು ನೀಡುವ ಕಾರ್ಯಕ್ರಮ ನಡೆಸಲಾಗಿದೆ. ಸರಕಾರಿ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ ಹೆಚ್1ಎನ್1 ಕುರಿತು ಅರಿವು ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖಾ ಸಿಬ್ಬಂದಿಯವರು ಮನೆ ಮನೆಗೆ ಭೇಟಿ ನೀಡಿ, ಕರಪತ್ರ ನೀಡಿ ಅರಿವು ಮೂಡಿಸುವ ಕೆಲಸ ನಿರ್ವಹಿಸುತಿದ್ದಾರೆ. ಹೆಚ್1ಎನ್1 ಕಂಡುಬಂದ ಮನೆಗಳು ಮತ್ತು ಮನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ್ವರ ಸಮೀಕ್ಷೆ ಮಾಡಲಾಗುತ್ತಿದ್ದು, ಸಂಶಯಾಸ್ಪದ ಪ್ರಕರಣಗಳನ್ನು ಪತ್ತೆ ಹಚ್ಚಿ ಟೆಮಿಫ್ಲ್ಯೂ ಮಾತ್ರೆಗಳನ್ನು ನೀಡಲಾಗುತ್ತಿದೆ. ಪ್ರಾಥಮಿಕ / ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಟೆಮಿಫ್ಲ್ಯೂ 75 ಎಂ.ಜಿ ಮತ್ತು 45 ಎಂ.ಜಿ ಮಾತ್ರೆಗಳು ಹಾಗೂ ಸಿರಪ್ಗಳನ್ನು ದಾಸ್ತಾನು ಇರಿಸಲಾಗಿದೆ.
ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯವರು ರೋಗಿಗಳನ್ನು ಆರೈಕೆ ಮಾಡುವಾಗ ಎನ್. 95 ಮತ್ತು ಟ್ರಿಪಲ್ ಲೇಯರ್ಡ್ ಮಾಸ್ಕ್ಗಳನ್ನು ಬಳಸುವಂತೆ ಸೂಚಿಸಲಾಗಿದೆ. ಪ್ರತಿ ಆರೋಗ್ಯ ಸಂಸ್ಥೆಗಳಲ್ಲಿ ಹೆಚ್1ಎನ್1 ರೋಗಿಗಳಿಗಾಗಿ ಹಾಸಿಗೆಗಳನ್ನು ಕಾದಿರಿಸಿದ್ದು, ಸಂಶಯಾಸ್ಪದ ರೋಗಿಗಳನ್ನು ಪ್ರತ್ಯೇಕಿಕರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಸ್ಗಳನ್ನು ಕಾದಿರಿಸಲಾಗಿದ್ದು, ತೀವ್ರ ಸ್ವರೂಪದ ರೋಗಿಗಳಿಗೆ ಬಳಸಲು ಸೂಚಿಸಲಾಗಿದೆ.
ಹೆಚ್1ಎನ್1 ಕುರಿತು ಕರಪತ್ರಗಳನ್ನು ಮುದ್ರಿಸಿ ಹಂಚಲಾಗುತ್ತಿದೆ. ಪೋಸ್ಟರ್ ಮತ್ತು ಬ್ಯಾನರ್ಗಳನ್ನು ಮುದ್ರಿಸಿ, ಕಲ್ಯಾಣ ಮಂಟಪ, ಸಿನಿಮಾ ಮಂದಿರ, ರೈಲ್ವೇ ಸ್ಟೇಷನ್, ಬಸ್ಸು ನಿಲ್ದಾಣ, ದೇವಸ್ಥಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಎಲ್ಲಾ ಸರಕಾರಿ ವೈದ್ಯಾಧಿಕಾರಿಯವರಿಗೆ ಸೂಚಿಸಲಾಗಿದೆ.
ಜ್ವರ, ನೆಗಡಿ, ಕೆಮ್ಮು, ಗಂಟಲು ಕೆರೆತ, ತಲೆ ನೋವು, ಮೈಕೈ ನೋವು, ಸುಸ್ತು ಇತ್ಯಾದಿಗಳಿಂದ ರೋಗಿಗಳು ಎರಡು ದಿನದಲ್ಲಿ ಚಿಕಿತ್ಸೆಯಿಂದ ಗುಣಮುಖರಾಗದಿದ್ದಲ್ಲಿ ಸಮೀಪದ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಟೆಮಿಫ್ಲ್ಯೂ ಮಾತ್ರೆ ನೀಡಲಾಗುತ್ತದೆ. ಈಗಾಗಲೇ ಹೆಚ್1ಎನ್1 ಪ್ರಕರಣಗಳು ಕಂಡುಬಂದ ಮನೆಗಳಲ್ಲಿ ಕಂಡುಬರುವ ಸಂಶಯಾಸ್ಪದ ಪ್ರಕರಣಗಳಿಗೆ ಟೆಮಿಫ್ಲ್ಯೂ ಮಾತ್ರೆಗಳನ್ನು ನೀಡಲಾಗುತಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.