ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗುಟ್ಕಾ ನಿಷೇಧ ಆದೇಶವನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ. ಸತತ ಒತ್ತಡ ಮತ್ತು ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಆದೇಶವನ್ನು ಮರುಪರಿಶೀಲಿಸುವಂತೆ ಆಡಳಿತ ಮತ್ತು ವಿರೋಧಪಕ್ಷದ ಶಾಸಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಗುಟ್ಕಾ ನಿಷೇಧದಿಂದ ರಾಜ್ಯದ ಏಳೆಂಟು ಜಿಲ್ಲೆಗಳ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರಲಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಿಷೇಧಕ್ಕೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ.
ಶಾಸಕರ ಮನವಿಯನ್ನು ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿಷೇಧ ಆದೇಶವನ್ನು ವಾಪಸ್ ಪಡೆಯುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಗುಟ್ಕಾ ನಿಷೇಧದ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹಲವು ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಡಿಕೆ ಬೆಳೆಗಾರರ ಮೇಲೆ ನಿಷೇಧದ ಆದೇಶದಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದಾರೆ.
ಈ ಕುರಿತು ಶಾಸಕ ಬಸವರಾಜ್ ಶಿವಗಂಗ ಮಾತನಾಡಿ, ಗುಟ್ಕಾ ಬ್ಯಾನ್ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
ಆಹಾರ ಸುರಕ್ಷತಾ ಆಯುಕ್ತರ ಆದೇಶದಿಂದ ಈ ಗೊಂದಲ ಉಂಟಾಗಿದೆ. ರಾಜ್ಯದಲ್ಲಿ ಗುಟ್ಕಾ ನಿಷೇಧ ಹಲವು ವರ್ಷಗಳಿಂದಲೇ ಜಾರಿಯಲ್ಲಿದೆ. ಆದರೆ ಅಡಿಕೆಯೊಂದಿಗೆ ತಂಬಾಕು ಅಥವಾ ನಿಕೋಟಿನ್ ಸೇರಿಸಿ ಪ್ಯಾಕ್ ಮಾಡಿ ಮಾರಾಟ ಮಾಡಿದರೆ ಮಾತ್ರ ಅದು ನಿಷೇಧಕ್ಕೆ ಒಳಪಡುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಡಿಕೆ ಪ್ರತ್ಯೇಕ ಪ್ಯಾಕ್ಗೆ ನಿಷೇಧ ಇಲ್ಲ
ಅಡಿಕೆಯನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವುದಕ್ಕೆ ಯಾವುದೇ ನಿಷೇಧವಿಲ್ಲ ಎಂದು ಶಾಸಕ ಬಸವರಾಜ್ ಶಿವಗಂಗ ಸ್ಪಷ್ಟಪಡಿಸಿದ್ದಾರೆ.
ಗುಟ್ಕಾ ನಿಷೇಧದ ಆದೇಶದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಲ್ಲಿ ಉಂಟಾಗಿದ್ದ ಆತಂಕದ ನಡುವೆಯೇ ಅಡಿಕೆ ದರದಲ್ಲೂ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರದ ಆದೇಶವನ್ನು ಮರುಪರಿಶೀಲಿಸುವ ಸಾಧ್ಯತೆ ಇದ್ದು, ಈ ಕುರಿತು ಆರೋಗ್ಯ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ.















