ಬೆಂಗಳೂರು: ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟಕ್ಕೆ ಕರ್ನಾಟಕ ಸರ್ಕಾರ ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ಸಂಪೂರ್ಣ ನಿಷೇಧ ಹೇರಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 30(2)(a) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿ-2011ರ ನಿಯಮ 2.3.4ರ ಅಡಿಯಲ್ಲಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚನೆ ಹೊರಡಿಸಿದ ದಿನದಿಂದಲೇ ನಿಷೇಧ ಜಾರಿಗೆ ಬಂದಿದೆ.
ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ತಂಬಾಕು ಅಥವಾ ನಿಕೋಟಿನ್ ಅಂಶವನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ, ಬಳಿಕ ಗ್ರಾಹಕರು ಸುಲಭವಾಗಿ ಮಿಶ್ರಣ ಮಾಡಿಕೊಂಡು ಸೇವಿಸುವಂತೆ ಮಾರಾಟ ಮಾಡುವ ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ.
ಪ್ಯಾಕೆಟ್, ಸ್ಯಾಚೆಟ್ ಅಥವಾ ಯಾವುದೇ ಹೆಸರಿನಲ್ಲಿ ತಂಬಾಕು ಮತ್ತು ನಿಕೋಟಿನ್ ಮಿಶ್ರಿತ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟ ನಡೆಸುವುದು ನಿಷೇಧಿತವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.















