ಕುಂದಾಪುರ: ಹಾರೆಯಿಂದ ಹೊಡೆದು ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಸೌಕೂರು ಎಂಬಲ್ಲಿ ನಡೆದಿದೆ.
ಈ ಬಗ್ಗೆ ಗುಲ್ವಾಡಿ ಗ್ರಾಮದ ಸೌಕೂರು ವಿಶ್ವನಾಥ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಜ.15ರಂದು ಬೆಳಿಗ್ಗೆ ವಿಶ್ವನಾಥ್ ಶೆಟ್ಟಿ ಅವರು ಹೆಂಡತಿ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮನೆಯಲ್ಲಿರುವಾಗ ಮರಳು ತುಂಬಿದ ದೊಡ್ಡ ಲಾರಿಯೊಂದು ಅವರ ಜಾಗಕ್ಕೆ ಬಂದಿದ್ದು, ಅದನ್ನು ಪಿರ್ಯಾದಿದಾರರು ಪ್ರಶ್ನಿಸಿದ್ದಾರೆ. ಅಲ್ಲದೆ, ತಮ್ಮ ಜಾಗದಲ್ಲಿ ಲಾರಿ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಲಾರಿಯಿಂದ ಕೆಳಗೆ ಇಳಿದು ಬಂದ ಆರೋಪಿಗಳು, ವಿಶ್ವನಾಥ್ ಶೆಟ್ಟಿ ಹಾಗೂ ಹೆಂಡತಿ, ಮಕ್ಕಳಿಗೆ ಕಾಲಿನಿಂದು ತುಳಿದು ಹಾರೆಯಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ದೂರುದಾರರು ಸಹಿತ ನಾಲ್ವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.