ಡಿ. 8 ರಂದು ಟ್ರಿಪಲ್‌ ತಲಾಕ್ ಚಲನ ಚಿತ್ರದ ಮೊದಲ‌ ಪ್ರದರ್ಶನ

ಉಡುಪಿ: ಗುಲ್ವಾಡಿ ಟಾಕೀಸ್‌ ಬ್ಯಾನರ್‌ನಡಿ ನಿರ್ಮಾಣಗೊಂಡ ಯಾಕುಬ್‌ ಖಾದರ್‌  ಗುಲ್ವಾಡಿ ಮೊದಲ ಬಾರಿಗೆ ನಿರ್ದೇಶಿಸಿದ ‘ಟ್ರಿಪಲ್‌ ತಲಾಕ್‌’ ಬ್ಯಾರಿ ಭಾಷೆಯ ಚಲನಚಿತ್ರದ ಮೊದಲ ಪ್ರದರ್ಶನ ಡಿ. 8ರಂದು ಇಂಗ್ಲೆಂಡಿನ ನೈರುತ್ಯ ಕರಾವಳಿಯ ಬ್ರಿಸ್ಟನ್‌ನ ಸ್ಕಾಟ್‌ ಚಿತ್ರಮಂದಿರದಲ್ಲಿ ನಡೆಯಲಿದೆ.

ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಯಾಕುಬ್‌ ಖಾದರ್‌ ಗುಲ್ವಾಡಿ, ತ್ರಿವಳಿ ತಲಾಕ್‌ ಸಮಸ್ಯೆ ಹಾಗೂ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪನ್ನು ಆಧರಿಸಿ, ಚಿತ್ರದ ಕಥೆಯನ್ನು ಹೆಣೆಯಲಾಗಿದೆ. 90 ನಿಮಿಷಗಳ ಅವಧಿಯ ಈ ಚಿತ್ರವನ್ನು ಕುಂದಾಪುರ, ಗುಲ್ವಾಡಿ, ಕೋಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಮಾಡುವುದರ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನು ನಾನು ವಹಿಸಿಕೊಂಡಿದ್ದೇನೆ. ಮುಂಬೈಯ ನಾರಾಯಣ ಪ್ರಭಾ ಸುವರ್ಣ ಸಹನಿರ್ಮಾಪಕರಾಗಿದ್ದಾರೆ ಎಂದರು.

ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್‌ ಬರೆದ ಕಥೆಯನ್ನು ಆಧರಿಸಿ ಸಿನಿಮಾ ತಯಾರಿಸಲಾಗಿದೆ. ತಲಾಕ್‌ ಬಗ್ಗೆ ಸಾರ್ವಜನಿಕ ವಲಯದಲ್ಲಿರುವ ತಪ್ಪು ಕಲ್ಪನೆ ಹಾಗೂ ಕುರಾನ್‌ನಲ್ಲಿ ಏನು ಹೇಳಲಾಗಿದೆ ಎಂಬುದನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ‌ ಮಾಡಲಾಗಿದೆ. ಚಿತ್ರದ ಶೇ. 90ರಷ್ಟು ಭಾಗದ ಚಿತ್ರೀಕರಣವನ್ನು ಮೊದಲೇ ಪೂರ್ಣಗೊಳಿಸಲಾಗಿತ್ತು. ಈ ಸಂದರ್ಭ ಸುಪ್ರೀಂ ಕೋರ್ಟ್‌ ತೀರ್ಪು ಬಂದ ಹಿನ್ನೆಲೆಯಲ್ಲಿ ಚಿತ್ರದ ಬಹುತೇಕ ಭಾಗವನ್ನು ಮರುಚಿತ್ರೀಕರಣ ಮಾಡಲಾಗಿದೆ. ಆದ್ದರಿಂದ ಚಿತ್ರಕ್ಕೆ ಸುಮಾರು ರೂ.25 ಲಕ್ಷ ವೆಚ್ಚವಾಗಿದೆ ಎಂದು ತಿಳಿಸಿದರು.


ಚಿತ್ರದ ಮುಖ್ಯಭೂಮಿಕೆಯಲ್ಲಿ ರೂಪಾ ವರ್ಕಾಡಿ, ನವ್ಯಾ ಪೂಜಾರಿ, ಅಝರ್‌ ಷಾ, ರವಿಕಿರಣ್‌ ಮುರ್ಡೇಶ್ವರ, ಬೇಬಿ -ಫಾಹಿಮಾ, ಮಾಸ್ಟರ್‌ ಫಾಹದ್‌, ಮುಹಮ್ಮದ್‌ ಬಡ್ಡೂರು, ಎಂ.ಕೆ. ಮಾತಾ, ಎ.ಎಸ್‌.ಎನ್‌. ಹೆಬ್ಬಾರ್‌, ಹಂಝಾ ಅಭಿಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನಟಿ ನವ್ಯಾ ಪೂಜಾರಿ, ನಟ ಅಝರ್‌ ಷಾ, ವಕೀಲ ರವಿಕಿರಣ್‌ ಮುರ್ಡೇಶ್ವರ ಇದ್ದರು.