ಗುಲಾಬಿ ಕೊಲೆ ಪ್ರಕರಣ: ಆರೋಪಿ ಪತ್ನಿಗೆ ಗುಲಾಬಿ ಮನೆಯವರಿಂದ ಹಲ್ಲೆಗೆ ಯತ್ನ

ಕುಂದಾಪುರ: ಹೆಮ್ಮಾಡಿ ಗುಲಾಬಿ ಕೊಲೆ ಪ್ರಕರಣದ ಆರೋಪಿಯನ್ನು ಸೋಮವಾರ ಸ್ಥಳ ಮಹಜರಿಗೆ ಕರೆತಂದ ವೇಳೆಯಲ್ಲಿ ರೊಚ್ಚಿಗೆದ್ದ ಗುಲಾಬಿ ಮನೆಯವರು ಆರೋಪಿಯ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮುದೂರು ನಿವಾಸಿ ರವಿರಾಜ್ ಪ್ರಕರಣ ಆರೋಪಿಯಾಗಿದ್ದು, ಚಿನ್ನಾಭರಣಕ್ಕಾಗಿ ಗುಲಾಬಿಯನ್ನು ಕೊಲೆಗೈದಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಆರೋಪಿ ರವಿ ವಿಜಯ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯ ಪತಿಯಾಗಿದ್ದು, ಗೇರುಬೀಜ ಕಾರ್ಖಾನೆಯ ಸಿಬ್ಬಂದಿಗಳಿಗೆ ಕೊಡಲಾಗಿದ್ದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಆರೋಪಿ ರವಿರಾಜ್‌ಗೆ ಪತ್ನಿ ಹಾಗೂ ನಾಲ್ಕು ವರ್ಷದ ಪುತ್ರ ಇದ್ದಾನೆ.

ಸೋಮವಾರ ಮಧ್ಯಾಹ್ನದ ವೇಳೆಗೆ ಘಟನಾ ಸ್ಥಳವಾದ ಗುಲಾಬಿ ವಾಸಿಸುತ್ತಿದ್ದ ಹರೆಗೋಡು ಸಮೀಪವಿರುವ ಮನೆಗೆ ಆರೋಪಿ ರವಿರಾಜ್‌ನನ್ನು ಕರೆತಂದಿದ್ದರು. ಸ್ಥಳ ಮಹಜರು ನಡೆಸಿ ಅಲ್ಲೇ ಸಮೀಪವಿರುವ ರವಿರಾಜ್ ಮನೆಗೂ ಕರೆತಂದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿಯನ್ನು ತನಿಖಾಧಿಕಾರಿ ಸಿಪಿಐ ಮಂಜಪ್ಪ ಠಾಣೆಗೆ ಕರೆದೊಯ್ದರು.

ಆರೋಪಿ ರವಿರಾಜ್‌ನನ್ನು ಕರೆದೊಯ್ದ ಬಳಿಕ ಅಲ್ಲೇ ಸೇರಿದ್ದ ಗುಲಾಬಿ ಮನೆಯವರು ಮನೆಯ ಪಡಸಾಲೆಯಲ್ಲಿ ನಿಂತಿದ್ದ ಆರೋಪಿ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿದರು. ಈ ವೇಳೆ ಸ್ಥಳೀಯರು ತಪ್ಪಿಸುವ ಪ್ರಯತ್ನ ನಡೆಸಿದ್ದು, ಕೆಲಕಾಲ ಉದ್ವಿಘ್ನ ಸ್ಥಿತಿ ನಿರ್ಮಾಣವಾಯಿತು. ಅಲ್ಲೇ ದೂರದಲ್ಲಿ ನಿಂತಿದ್ದ ಪೊಲೀಸರ ತಂಡ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ತನಿಖೆಗೆ ಕಿಂಚಿತ್ ಲೋಪ ಬಾರದೆ ಸಹಕರಿಸಿದ ಆರೋಪಿ ಪತ್ನಿಯ ಮೇಲೆ ಹಲ್ಲೆ ಮಾಡುವುದು ಏನಿತ್ತು. ಹಲ್ಲೆ ಮಾಡೋದಕೆ ನೀವ್ಯಾರು ಎಂದು ಪೊಲೀಸರು ಗುಲಾಬಿ ಮನೆಯವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗುಲಾಬಿ ಸಹೋದರಿ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆರೋಪಿ ಪತ್ನಿ ಏನಾದರೂ ಹೆಚ್ಚುಕಮ್ಮಿ ಮಾಡಿಕೊಂಡರೆ ನೀವೆ ಜವಾಬ್ದಾರರು ಎಂದು ಪೊಲೀಸರು ಗುಲಾಬಿ ಕುಟುಂಬಿಕರಿಗೆ ಖಡಕ್ ವಾರ್ನಿಂಗ್ ನೀಡಿದರು.

ಹರೆಗೋಡು ಸಮೀಪದ ವಿಜಯ ಗೇರುಬೀಜ ಕಾರ್ಖಾನೆ ಸಮೀಪದ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ಗುಲಾಬಿ ಫೆಬ್ರವರಿ ೨೮ರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದು, ಮಾರ್ಚ್ ೧ರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಗುಲಾಬಿ ಧರಿಸಿದ್ದ ಚಿನ್ನಾಭರಣಗಳು ಇಲ್ಲದ ಕಾರಣ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದರಿಂದ ಪೊಲೀಸರು ಹೆಚ್ಚಿನ ತನಿಖೆಗಾಗಿ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದರು. ನಾಲ್ಕು ದಿನಗಳ ಬಳಿಕ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದ್ದು, ಗುಲಾಬಿಯ ಕತ್ತು ಹಿಸುಕಿ ಉಸಿರುಗಟ್ಟಿ ಸಾಯಿಸಲಾಗಿರುವ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಬಳಿಕ ಪ್ರಕರಣ ಭೇದಿಸಲು ಮುಂದಾದ ಪೊಲೀಸರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆರೋಪಿಯ ಪತ್ತೆಗಾಗಿ ನಾಲ್ಕು ತಂಡ ರಚಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರು ೧೦ ದಿನಗಳ ಬಳಿಕ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.